ಹೊಸದಿಗಂತ ಡಿಜಿಟಲ್ ಡೆಸ್ಕ್:
ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಬ್ರೆಜಿಲ್ನ ಪೀಲೆ ಧರಿಸಿದ್ದ ಐಕಾನಿಕ್ ನಂಬರ್ 10 ಟಿ-ಶರ್ಟ್ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. 1958ರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಅವರು ಧರಿಸಿದ್ದ ಈ ಜೆರ್ಸಿ ಬರೋಬ್ಬರಿ 47.23 ಕೋಟಿ ರೂ.ಗೆ (4.9 ಮಿಲಿಯನ್ ಯುಎಸ್ ಡಾಲರ್) ಸೇಲ್ ಆಗುವ ಮೂಲಕ ಹೊಸ ದಾಖಲೆ ಬರೆದಿದೆ.
ಸ್ವೀಡನ್ ವಿರುದ್ಧದ ಐತಿಹಾಸಿಕ ಪಂದ್ಯ
1958ರಲ್ಲಿ ಸ್ಟಾಕ್ಹೋಮ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಸ್ವೀಡನ್ ವಿರುದ್ಧ ಬ್ರೆಜಿಲ್ 5-2 ಅಂತರದಿಂದ ಗೆದ್ದು, ತನ್ನ ಮೊದಲ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಅಂದು ಕೇವಲ 17 ವರ್ಷದ ಬಾಲಕನಾಗಿದ್ದ ಪೀಲೆ, ಫೈನಲ್ನಲ್ಲಿ ಅದ್ಭುತ 2 ಗೋಲು (ಬ್ರೇಸ್ ಬಾಲ್) ಗಳಿಸಿ ಮಿಂಚಿದ್ದರು. ಆ ಟೂರ್ನಿಯಲ್ಲಿ ಅವರು ಒಟ್ಟು 6 ಗೋಲು ಬಾರಿಸಿದ್ದರು. ಈ ಮೂಲಕ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶೇಷವೆಂದರೆ, ಇದೇ ಟಿ-ಶರ್ಟ್ 2004ರ ಹರಾಜಿನಲ್ಲಿ ಕೇವಲ 91,51,323 ರೂ.ಗೆ ಮಾರಾಟವಾಗಿತ್ತು.

ವಿಶ್ವದ 2ನೇ ಅತ್ಯಂತ ದುಬಾರಿ ಫುಟ್ಬಾಲ್ ಜೆರ್ಸಿ
ಇದು ಫುಟ್ಬಾಲ್ ಇತಿಹಾಸದಲ್ಲೇ ಹರಾಜಾದ ಎರಡನೇ ಅತ್ಯಂತ ದುಬಾರಿ ಟಿ-ಶರ್ಟ್ ಆಗಿದೆ. ಇದಕ್ಕೂ ಮುನ್ನ 1986ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಸಿದ್ಧ ‘ಹ್ಯಾಂಡ್ ಆಫ್ ಗಾಡ್’ ಗೋಲು ಗಳಿಸಿದ್ದ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಜೆರ್ಸಿ 2022 ರಲ್ಲಿ 89.64 ಕೋಟಿ ರೂ.ಗೆ ಮಾರಾಟವಾಗಿ ಅಗ್ರಸ್ಥಾನದಲ್ಲಿದೆ.
ಮೂರು ವಿಶ್ವಕಪ್ ಗೆದ್ದ ಏಕೈಕ ಹೀರೋ
2022ರಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದ ಪೀಲೆ, ಬ್ರೆಜಿಲ್ ಪರ 1958, 1962 ಮತ್ತು 1970 ರಲ್ಲಿ ಫಿಫಾ ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. ಒಬ್ಬ ಆಟಗಾರ ಅತಿ ಹೆಚ್ಚು ಬಾರಿ ವಿಶ್ವಕಪ್ ಗೆದ್ದ ಅಪರೂಪದ ದಾಖಲೆ ಇಂದಿಗೂ ಪೀಲೆ ಹೆಸರಿನಲ್ಲೇ ಭದ್ರವಾಗಿದೆ.



