September 4, 2026
Friday, September 4, 2026
spot_img

ODI ಕೆರಿಯರ್‌ಗೆ ರೋಹಿತ್ ಗುಡ್‌ಬೈ? ಲಾರ್ಡ್ಸ್‌ನಲ್ಲಿ ಕೊನೆ ಪಂದ್ಯ ಆಡ್ತಾರಾ ‘ಹಿಟ್‌ಮ್ಯಾನ್’?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇಂಗ್ಲೆಂಡ್ ನಡುವಿನ ODI ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ನಾಯಕ ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಜುಲೈ 19ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮುಖಾಮುಖಿಯೇ ಇವರ ಕೊನೆಯ ಏಕದಿನ ಪಂದ್ಯವಾಗಲಿದೆ ಎನ್ನಲಾಗುತ್ತಿದೆ.

2027 ವಿಶ್ವಕಪ್‌ಗಾಗಿ ಯುವ ಪಡೆಗೆ ಮಣೆ?

ಮೂಲಗಳ ಪ್ರಕಾರ, ಬಿಸಿಸಿಐ ಆಯ್ಕೆ ಮಂಡಳಿ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ರೋಹಿತ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಹೊಸ ತಂಡವನ್ನು ಕಟ್ಟಲು ನಿರ್ಧರಿಸಿರುವ ಮಂಡಳಿ, ಯುವ ಕ್ರಿಕೆಟಿಗರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ಹೀಗಾಗಿ ರೋಹಿತ್ ಅವರನ್ನೇ ಮುಂದಿನ ಒನ್ ಡೇ ಸರಣಿಗಳಿಗೆ ಪರಿಗಣಿಸದಿರಲು ಚಿಂತನೆ ನಡೆದಿದೆ ಎಂಬ ಬಲವಾದ ವದಂತಿಗಳು ಹರಿದಾಡುತ್ತಿವೆ.

ಲಂಡನ್‌ಗೆ ತಲುಪಿದ ಪೋಷಕರು

ರೋಹಿತ್ ಶರ್ಮಾ ಇನ್ನು ಮುಂದೆ ಮೈದಾನಕ್ಕಿಳಿಯಲ್ಲ ಎಂಬ ಸಂದೇಶ ಹರಡುತ್ತಿದ್ದಂತೆ, ಅವರ ತಂದೆ-ತಾಯಿ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಕುತೂಹಲಕಾರಿ ಸುದ್ದಿ ಬಂದಿದೆ. ಮಗನ ವಿದಾಯದ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವರು ಹೋಗಿದ್ದಾರೆಯೇ ಎಂಬ ಅನುಮಾನ ಮೂಡಿದ್ದರೂ, ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಈ ಹಿರಿಯ ಆಟಗಾರ ಗೌರವಯುತವಾಗಿ ನಿವೃತ್ತಿ ಘೋಷಿಸುತ್ತಾರಾ ಅಥವಾ ಮುಂದಿನ ಹಾದಿ ಏನೆಂಬುದನ್ನು ಕಾಲವೇ ನಿರ್ಧರಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !