July 17, 2026
Friday, July 17, 2026
spot_img

23 ವರ್ಷಗಳ ಕಾನೂನು ಹೋರಾಟ ಅಂತ್ಯ: ಕೋಟ್ಯಂತರ ಮೌಲ್ಯದ ರಕ್ಷಣಾ ಇಲಾಖೆ ಭೂಮಿ ಮರಳಿ ವಶಕ್ಕೆ

ಹೊಸದಿಗಂತ ವರದಿ ಬೆಳಗಾವಿ :

ಸುಮಾರು 23 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಬೆಳಗಾವಿಯ ಯೂನಿಯನ್ ಜಿಮ್ಖಾನಾ ವಶದಲ್ಲಿದ್ದ ಅಂದಾಜು 6.50 ಎಕರೆ ರಕ್ಷಣಾ ಇಲಾಖೆಯ ಅಮೂಲ್ಯ ಭೂಮಿಯನ್ನು ರಕ್ಷಣಾ ಸಚಿವಾಲಯವು ತನ್ನ ವಶಕ್ಕೆ ಪಡೆದುಕೊಂಡಿದೆ. ಇದರೊಂದಿಗೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಭೂ ವಿವಾದಕ್ಕೆ ತೆರೆ ಬಿದ್ದಂತಾಗಿದೆ.

ಬೆಳಗಾವಿ ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿರುವ ಈ ಜಾಗವನ್ನು ಯೂನಿಯನ್ ಜಿಮ್ಖಾನಾಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಆದರೆ 2002ರಲ್ಲಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದರೂ ಜಿಮ್ಖಾನಾ ಆಡಳಿತ ಮಂಡಳಿ ಭೂಮಿಯನ್ನು ತೆರವುಗೊಳಿಸದೆ ತನ್ನ ವಶದಲ್ಲಿಯೇ ಉಳಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ಮತ್ತು ಯೂನಿಯನ್ ಜಿಮ್ಖಾನಾ ನಡುವೆ ನ್ಯಾಯಾಲಯದಲ್ಲಿ ಸುದೀರ್ಘ ಕಾನೂನು ಹೋರಾಟ ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2026ರ ಏಪ್ರಿಲ್ 6ರಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಮಹತ್ವದ ತೀರ್ಪು ನೀಡಿದ್ದು, ಯೂನಿಯನ್ ಜಿಮ್ಖಾನಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಭಾರತ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯದ ಪರವಾಗಿ ಆದೇಶ ನೀಡಿತ್ತು.

ಹೈಕೋರ್ಟ್ ಆದೇಶದ ಅನ್ವಯ ಜುಲೈ 16ರಂದು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಭೂಮಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಕರ್ನಾಟಕ ವಲಯದ ರಕ್ಷಣಾ ಎಸ್ಟೇಟ್ಸ್ ಅಧಿಕಾರಿ ದಿವ್ಯಾ ಎಸ್. ಹೊಸೂರು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಪೊಲೀಸ್ ಇಲಾಖೆ, ಕಂಟೋನ್ಮೆಂಟ್ ಬೋರ್ಡ್ ಹಾಗೂ ಎಂಎಲ್‌ಐಆರ್‌ಸಿ (MLIRC) ಭಾರತೀಯ ಸೇನಾ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಭೂಮಿಯನ್ನು ರಕ್ಷಣಾ ಇಲಾಖೆ ಅಧಿಕೃತವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. ಬಳಿಕ ಸಂಪೂರ್ಣ ಆಸ್ತಿಯನ್ನು ಸೀಲ್ ಮಾಡಿ, ಭದ್ರತಾ ಬೇಲಿಯೊಳಗೆ ಸೇರಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ರಕ್ಷಣಾ ಸಚಿವಾಲಯ, ದೇಶದ ಭದ್ರತೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಆಸ್ತಿಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ರಕ್ಷಣಾ ಇಲಾಖೆಯ ಭೂಮಿಯ ಮೇಲಿನ ಯಾವುದೇ ಕಾನೂನುಬಾಹಿರ ಆಕ್ರಮಣದ ವಿರುದ್ಧ ಮುಂದೆಯೂ ಕಾನೂನುಬದ್ಧವಾಗಿ ಕಠಿಣ ಹಾಗೂ ಸಮಯೋಚಿತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !