ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಾಣಿಗಳಿಗೆ ಭಾಷೆ ತಿಳಿಯದಿದ್ದರೂ ಭಾವನೆಗಳು ಅರ್ಥವಾಗುತ್ತವೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಅಪರೂಪದ ದೃಶ್ಯವೇ ಸಾಕ್ಷಿ. ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ನಿಜವಾದ ಗೆಳೆಯನಂತೆ ಮೂಕಪ್ರಾಣಿಯೊಂದು ಇಲ್ಲಿ ವರ್ತಿಸಿದೆ.
ಯಜಮಾನನ ಕಣ್ಣೀರು ಒರೆಸಿದ ಗೋಮಾತೆ
ತನ್ಮಯ ಪಾಂಡೆ (Tanmay Pande) ಎಂಬುವವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಭಾವುಕ ವಿಡಿಯೋದಲ್ಲಿ, ಯುವಕನೊಬ್ಬ ಹಸುವಿನ ಮುಂದೆ ಕುಳಿತು ತೀವ್ರವಾಗಿ ಕಣ್ಣೀರು ಹಾಕುತ್ತಿದ್ದಾನೆ. ತನ್ನ ಯಜಮಾನನ ಮನದ ಬೇಗುದಿಯನ್ನು ತಕ್ಷಣವೇ ಗ್ರಹಿಸಿದ ಆ ಮೂಕ ಜೀವಿ, ಮೆಲ್ಲನೆ ಹತ್ತಿರ ಬಂದು ಆತನ ಭುಜದ ಮೇಲೆ ಮುಖವಿಟ್ಟು ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ.
ಮನುಷ್ಯರಿಗಿಂತ ಮಿಗಿಲಾದ ಪ್ರೀತಿಯನ್ನು ಮೂಕಪ್ರಾಣಿಗಳು ನೀಡಬಲ್ಲವು ಎಂಬುದನ್ನು ಈ ದೃಶ್ಯ ಸಾಬೀತುಪಡಿಸಿದೆ.
ನೆಟ್ಟಿಗರ ಹೃದಯ ಗೆದ್ದ ವಿಡಿಯೋ
ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಈ ವಿಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. “ಪ್ರೀತಿಯ ಭಾಷೆಗೆ ಯಾವುದೇ ಮಿತಿಯಿಲ್ಲ” ಎಂದು ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಅಪೂರ್ವ ಪ್ರೇಮಕ್ಕೆ ತಲೆಬಾಗಿದ್ದಾರೆ.



