ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 20ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ‘ವಂದೇ ಮಾತರಂ’ಗೆ ಅವಮಾನ ಅಥವಾ ಹಾಡುವುದಕ್ಕೆ ಅಡ್ಡಿಪಡಿಸಿದರೆ ಶಿಕ್ಷೆ ವಿಧಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಲು ಸಜ್ಜಾಗಿದೆ. ಕೇಂದ್ರ ಸಚಿವ ಸಂಪುಟ ಈಗಾಗಲೇ ಈ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ.
ಕಾನೂನುಬದ್ಧ ರಕ್ಷಣೆ
ಪ್ರಸ್ತಾವಿತ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ’ ಜಾರಿಗೆ ಬಂದರೆ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ಸಂವಿಧಾನದಂತೆಯೇ ‘ವಂದೇ ಮಾತರಂ’ಗೂ ಕಾನೂನುಬದ್ಧ ರಕ್ಷಣೆ ದೊರೆಯಲಿದೆ. ಹಾಡಿಗೆ ಅವಮಾನ ಮಾಡುವುದು ಅಥವಾ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಗಳ ಪ್ರಕಾರ, ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭಗಳಲ್ಲಿ ‘ವಂದೇ ಮಾತರಂ’ಗೂ ಸೂಕ್ತ ಗೌರವ ನೀಡುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಈಗ ಕಾನೂನು ತಿದ್ದುಪಡಿ ತರಲಾಗುತ್ತಿದೆ.
ಇದನ್ನೂ ಓದಿ:
ಹಲವು ಪ್ರಮುಖ ಮಸೂದೆಗಳ ಮಂಡನೆ
ಇದೇ ಅಧಿವೇಶನದಲ್ಲಿ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಸರ್ಕಾರ ಮಂಡಿಸಲಿದೆ. ಹೊಸ ನಿಯಮದಂತೆ, ಎರಡು ವರ್ಷಗಳ ಬಳಿಕ ಜನನ ಅಥವಾ ಮರಣ ನೋಂದಣಿ ಮಾಡಲು ಮೊದಲ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆದೇಶ ಕಡ್ಡಾಯವಾಗುವ ಪ್ರಸ್ತಾವವಿದೆ.
ಇದರ ಜೊತೆಗೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ರಿಂದ 37ಕ್ಕೆ ಹೆಚ್ಚಿಸುವ ಮಸೂದೆ, ವಿದೇಶಿ ಅನುದಾನ ನಿಯಂತ್ರಣ (FCRA) ತಿದ್ದುಪಡಿ ಮಸೂದೆ ಹಾಗೂ ಉನ್ನತ ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ’ ಮಸೂದೆಗಳನ್ನೂ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ಈ ನಡುವೆ, ಮಹಿಳಾ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ (Delimitation) ಸಂಬಂಧಿತ ಮಸೂದೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದರೂ, ಪ್ರಸ್ತುತ ಅಧಿವೇಶನದ ಅಧಿಕೃತ ಕಾರ್ಯಸೂಚಿಯಲ್ಲಿ ಅವುಗಳಿಗೆ ಸ್ಥಾನ ಸಿಕ್ಕಿಲ್ಲ. ಸರ್ಕಾರ ಅಗತ್ಯ ಸಮಯದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.



