ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ದಿಢೀರ್ ಆಗಿ ಮಳೆ ಸುರಿದಿದ್ದು, ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಗಾಲದಲ್ಲೂ ಬೇಸಿಗೆಯಂತೆ ಬಿಸಿಲಿನ ಬೇಗೆ ಅನುಭವಿಸುತ್ತಿದ್ದ ರಾಜಧಾನಿ ಜನತೆಗೆ ಈ ಮಳೆ ತಂಪು ನೀಡಿದೆಯಾದರೂ, ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಕಿರಿಕಿರಿ ಉಂಟುಮಾಡಿದೆ.
ಬೆಂಗಳೂರಿನ ಎಲ್ಲೆಲ್ಲಿ ಮಳೆಯಾಗಿದೆ?
ನಗರದ ಪ್ರಮುಖ ಭಾಗಗಳಾದ ಮೈಸೂರು ರಸ್ತೆ, ಟೌನ್ ಹಾಲ್, ಚಾಮರಾಜಪೇಟೆ, ಕಾರ್ಪೋರೇಷನ್, ಕೆ.ಆರ್. ಸರ್ಕಲ್, ಕೆ.ಆರ್. ಮಾರ್ಕೆಟ್, ಮಲ್ಲೇಶ್ವರಂ ಹಾಗೂ ಶೇಷಾದ್ರಿಪುರಂ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ದ್ವಿಚಕ್ರ ವಾಹನ ಸವಾರರು ಮೇಲ್ಸೇತುವೆ ಹಾಗೂ ಬಸ್ ನಿಲ್ದಾಣಗಳ ಆಶ್ರಯ ಪಡೆದ ದೃಶ್ಯಗಳು ಕಂಡುಬಂದವು.
ಮುಂದಿನ 4 ದಿನ ಸಾಧಾರಣ ಮಳೆ:
ಬೆಂಗಳೂರು ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಇದೇ ರೀತಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:
ರಾಜ್ಯದ ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ:
ರಾಜಧಾನಿ ಮಾತ್ರವಲ್ಲದೆ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ವರುಣನ ಆರ್ಭಟ ಜೋರಾಗುವ ಸಾಧ್ಯತೆ ಇದೆ. ಜುಲೈ 18 ಮತ್ತು 19ರಂದು ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.



