July 17, 2026
Friday, July 17, 2026
spot_img

ಗಾರ್ಡ್ ಆಗಿ ಸೇರಿ ಅದೇ ಇಲಾಖೆಯ ಡಿಸಿಎಫ್ ಆಗಿ ನಿವೃತ್ತಿ! ಬೆಳಗಾವಿಯ ಎಸ್.ಎಸ್.ನಿಂಗಾಣಿ ಸ್ಪೂರ್ತಿದಾಯಕ ಕಥೆ!

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ತಂದೆಯ ಅಮಾನುಷ ಹತ್ಯೆಯ ನೋವನ್ನು ಮನದಲ್ಲೇ ಇಟ್ಟುಕೊಂಡು ಅನುಕಂಪದ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಸೇವೆ ಆರಂಭಿಸಿದ್ದ ಯುವಕ, ನಾಲ್ಕು ದಶಕಗಳ ಬಳಿಕ ಅದೇ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹುದ್ದೆಯಿಂದ ನಿವೃತ್ತಿಯಾಗುತ್ತಿರುವ ಅಪರೂಪದ ಸಾಧನೆಗೆ ಸಾಕ್ಷಿಯಾಗಿದ್ದಾರೆ.

ಬೆಳಗಾವಿ ಅರಣ್ಯ ವಿಭಾಗದ ಡಿಸಿಎಫ್ ಎಸ್. ಎಸ್. ನಿಂಗಾಣಿ,1985ರ ಫೆಬ್ರವರಿ 1ರಂದು ತಂದೆಯ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ಫಾರೆಸ್ಟ್ ಗಾರ್ಡ್ ಆಗಿ ನೇಮಕಗೊಂಡಿದ್ದರು. 41 ವರ್ಷಗಳಿಗೂ ಅಧಿಕ ಅವಧಿಯ ಸೇವೆ ಪೂರ್ಣಗೊಳಿಸಿ 2026ರ ಜುಲೈ 31ರಂದು ನಿವೃತ್ತಿಯಾಗಲಿದ್ದಾರೆ.

ಇವರ ತಂದೆ ಬೆಳಗಾವಿ ಅರಣ್ಯ ವಿಭಾಗದ ಕಾಕತಿ ಮತ್ತು ಬೆಳಗಾವಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದರು. ಆ ದುಃಖದ ನಡುವೆಯೇ ಅಂದಿನ ಡಿಸಿಎಫ್ ಎ. ಕೆ. ವರ್ಮಾರಿಂದ ನೌಕರಿ ಪತ್ರ ಸ್ವೀಕರಿಸಿದ್ದ ನಿಂಗಾಣಿ, ಶಿಸ್ತು, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇಲಾಖೆಯ ಅತ್ಯುನ್ನತ ಅಧಿಕಾರಿಗಳ ಸಾಲಿಗೆ ಏರಿದ್ದಾರೆ.

ವಿಶೇಷವೆಂದರೆ, 41 ವರ್ಷಗಳ ಹಿಂದೆ ನೌಕರಿ ಪತ್ರ ಪಡೆದಿದ್ದ ಅದೇ ಡಿಸಿಎಫ್ ಚೇಂಬರ್ನಲ್ಲಿ ಬಳಿಕ ಡಿಸಿಎಫ್ ಆಗಿ ಅಧಿಕಾರ ಸ್ವೀಕರಿಸಿ, ಅಲ್ಲಿಯೇ ನಿವೃತ್ತಿಯಾಗುತ್ತಿರುವುದು ಅವರ ಸೇವಾ ಬದುಕಿನ ಭಾವನಾತ್ಮಕ ಅಧ್ಯಾಯವಾಗಿದೆ.

“ನೌಕರಿ ಪಡೆಯುವಾಗ ತಲೆ ತಗ್ಗಿಸಿ ನಿಂತಿದ್ದ ಅದೇ ಸ್ಥಳದಲ್ಲಿ, ವರ್ಷಗಳ ಬಳಿಕ ಡಿಸಿಎಫ್ ಆಗಿ ಕುರ್ಚಿ ಅಲಂಕರಿಸಿದ ಕ್ಷಣ ನನ್ನ ಜೀವನದ ಅತ್ಯಂತ ಭಾವನಾತ್ಮಕ ಅನುಭವ. ಇದು ದೈವ ಇಚ್ಛೆಯ ಲೀಲೆ ಎನ್ನಿಸುತ್ತದೆ. ಇದೇ ನನ್ನ ‘ಜಾಯನಿಂಗ್ ಆ್ಯಂಡ್ ರಿಟಾಯರ್ಡ್ ಚೇಂಬರ್’,” ಎಂದು ಎಸ್. ಎಸ್. ನಿಂಗಾಣಿ ಸ್ಮರಿಸಿದ್ದಾರೆ.

ಗಾರ್ಡ್ನಿಂದ ಡಿಸಿಎಫ್ ಹುದ್ದೆವರೆಗೆ ಏರಲು ನ್ಯಾಯನಿಷ್ಠೆ, ಶಿಸ್ತು, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಾರ್ವಜನಿಕರೊಂದಿಗೆ ಬೆಳೆಸಿಕೊಂಡ ಆತ್ಮೀಯತೆಯೇ ಕಾರಣ ಎಂದು ಅವರು ಹೇಳಿದ್ದಾರೆ.

ಅರಣ್ಯ ಸೇವೆಯ ಮೇಲಿನ ಕುಟುಂಬದ ಬದ್ಧತೆಯೂ ಗಮನಾರ್ಹವಾಗಿದೆ. ಎಸ್. ಎಸ್. ನಿಂಗಾಣಿ ಹಿರಿಯ ಪುತ್ರ ಪ್ರಸ್ತುತ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕುಟುಂಬದಲ್ಲಿ ಅರಣ್ಯ ಸೇವೆ ಮೂರನೇ ತಲೆಮಾರಿಗೆ ಮುಂದುವರಿದಿದೆ.

ಇದನ್ನೂ ಓದಿ:

ಸಾರ್ವಜನಿಕ ಸೇವೆಯಲ್ಲಿ ಮಾನವೀಯತೆ, ಕಾನೂನು ಪಾಲನೆ ಹಾಗೂ ಪ್ರಾಮಾಣಿಕತೆಯೇ ಯಶಸ್ಸಿನ ಮೂಲಮಂತ್ರ ಎಂಬ ಸಂದೇಶವನ್ನು ತಮ್ಮ ಸೇವಾ ಜೀವನದ ಮೂಲಕ ನಿಂಗಾನಿ ಸಾರಿದ್ದಾರೆ. ಅರಣ್ಯ ಸಂರಕ್ಷಣೆ, ಜನಸ್ನೇಹಿ ಆಡಳಿತ ಹಾಗೂ ಬದ್ಧ ಸೇವೆಗಾಗಿ ಅವರಿಗೆ “ಫ್ರೆಂಡ್ ಆಫ್ ದಿ ಫಾರೆಸ್ಟ್” ಎಂಬ ಗೌರವವೂ ಲಭಿಸಿದೆ.

ತಂದೆಯ ಹತ್ಯೆಯ ನೋವಿನಿಂದ ಆರಂಭವಾದ ಸೇವಾ ಪಯಣ, ಅದೇ ಇಲಾಖೆಯ ಡಿಸಿಎಫ್ ಹುದ್ದೆಯಲ್ಲಿ ಗೌರವಯುತ ನಿವೃತ್ತಿಯೊಂದಿಗೆ ಅಂತ್ಯಗೊಳ್ಳುತ್ತಿರುವುದು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅಪರೂಪದ ಹಾಗೂ ಸ್ಫೂರ್ತಿದಾಯಕ ಅಧ್ಯಾಯವಾಗಿ ಉಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !