ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಪತಿಯನ್ನು ಕರೆದುಕೊಂಡು ಹೋದ ಮಹಿಳೆ, ಪೂರ್ವನಿಯೋಜಿತ ಸಂಚಿನಂತೆ ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆ ಮಾಡಿಸಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾಳೆ. ಡಿಜಿಟಲ್ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.
ದೇವಸ್ಥಾನ ಪ್ರಯಾಣವೇ ಕೊಲೆ ಸಂಚು
ಮೃತನನ್ನು ರಮೇಶ್ ಎಂದು ಗುರುತಿಸಲಾಗಿದ್ದು, ಪತ್ನಿ ಹಸಿನಿಯೊಂದಿಗೆ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಮಗಳಿದ್ದರೂ, ವೈವಾಹಿಕ ಕಲಹ ಮತ್ತು ವಿವಾಹೇತರ ಸಂಬಂಧದ ವಿಚಾರವೇ ಈ ಕೃತ್ಯಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ:
ಮೊಬೈಲ್ ನೆಪದಲ್ಲಿ ನಿಲ್ಲಿಸಿದ ಬೈಕ್
ದೇವಸ್ಥಾನಕ್ಕೆ ತೆರಳುವ ವೇಳೆ ಮೊಬೈಲ್ ಫೋನ್ ರಸ್ತೆ ಮೇಲೆ ಬಿದ್ದಿದೆ ಎಂದು ಹೇಳಿ ಪತಿಯಿಂದ ಬೈಕ್ ನಿಲ್ಲಿಸುವಂತೆ ಪತ್ನಿ ಕೇಳಿದ್ದಾಳೆ. ಇದೇ ವೇಳೆ ಪೂರ್ವಸಿದ್ಧತೆಯೊಂದಿಗೆ ಅಲ್ಲೇ ಕಾದಿದ್ದ ಪ್ರಿಯಕರ ಮತ್ತು ಆತನ ಸಹಚರರು ರಮೇಶ್ ಅವರನ್ನು ಪೊದೆಗಳತ್ತ ಎಳೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷ್ಯ ನಾಶಕ್ಕೂ ಯತ್ನ
ಕೃತ್ಯದ ಬಳಿಕ ಆರೋಪಿಗಳು ಬಳಸಿದ ಬಟ್ಟೆ ಮತ್ತು ಕೈಗವಸುಗಳಿಗೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆ ವಿವರಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣದ ಸುಳಿವು ಪತ್ತೆಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ. ಕೊಲೆಯ ಹಿಂದಿನ ಸಂಪೂರ್ಣ ಸಂಚು ಮತ್ತು ಇತರರ ಪಾತ್ರವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.



