July 18, 2026
Saturday, July 18, 2026
spot_img

ಕುಡಿಯುವ ನೀರನ್ನ ಕೃಷಿಗೆ ಬಳಸಬೇಡಿ: ಮತ್ತೊಮ್ಮೆ ರೈತರಿಗೆ ಎಚ್ಚರಿಕೆ ಕೊಟ್ಟ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್;

ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆಯ ಹಿನ್ನೆಲೆಯಲ್ಲಿ, ರೈತರು ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಜಲಾಶಯಗಳಿಂದ ಬಿಡಲಾಗುತ್ತಿರುವ ನೀರು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದರು. ಮಂಡ್ಯ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯ ಇರಲಿ, ಜಲಾಶಯಗಳಿಂದ ನೀರು ಹರಿಸಲಾಗುತ್ತಿದೆ ಎಂಬ ಕಾರಣಕ್ಕೆ ಅದನ್ನು ವ್ಯವಸಾಯಕ್ಕೆ ಬಳಸಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಕುಡಿಯಲು ಮಾತ್ರ ನೀರು:

 ನಾವು ನೀರು ಬಿಟ್ಟಿರುವುದು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ. ಡ್ಯಾಂನಲ್ಲಿನ ನೀರಿನ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ರೈತರು ಈಗಾಗಲೇ ಬಿತ್ತನೆ ಮಾಡಿ, ನಾಟಿ ಹಾಕಿ ನಂತರ ನೀರು ಬಿಡಿ ಎಂದು ನನ್ನ ಮೇಲೆ ಒತ್ತಡ ತರಬಾರದು ಎಂದು ತಿಳಿಸಿದ್ದಾರೆ.

ಸಹಕಾರಕ್ಕೆ ಸಿಎಂ ಮನವಿ:

ಪ್ರಸ್ತುತ ತಮಿಳುನಾಡು ಹಾಗೂ ತುಂಗಭದ್ರಾ ಭಾಗದಿಂದಲೂ ನೀರಿಗಾಗಿ ತೀವ್ರ ಒತ್ತಡವಿದೆ. ಡ್ಯಾಂಗಳು ಭರ್ತಿಯಾದರೆ ನಾವೇ ರೈತರ ಬೆಳೆಗೆ ನೀರು ಕೊಡುತ್ತೇವೆ. ಅಲ್ಲಿಯವರೆಗೆ ದಯವಿಟ್ಟು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಿ ಎಂದು ಅವರು ರೈತರಲ್ಲಿ ವಿನಂತಿಸಿದರು.

ಇದನ್ನೂ ಓದಿ:

ಕಾವೇರಿ ವಿವಾದ ಹಾಗೂ ಮೇಕೆದಾಟು:

 ಸಂಸತ್ ಅಧಿವೇಶನದಲ್ಲಿ ತಮಿಳುನಾಡು ಕಾವೇರಿ ವಿಷಯ ಚರ್ಚಿಸಲು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಕಾವೇರಿ ನೀರು ನಮ್ಮ ಹಕ್ಕು. ಸುಪ್ರೀಂ ಕೋರ್ಟ್ ಕೂಡ ಕಾವೇರಿ ಮಂಡಳಿಯಲ್ಲಿ ಈ ಬಗ್ಗೆ ಚರ್ಚಿಸಲು ಅವಕಾಶ ನೀಡಿದೆ. ನಾವು ದೆಹಲಿಗೆ ತೆರಳಿ ನಮ್ಮ ಸಂಸದರೊಂದಿಗೆ ಮಾತನಾಡಲಿದ್ದೇವೆ ಎಂದರು. ಇದೇ ವೇಳೆ ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕಲ್ಲ, ತಮಿಳುನಾಡಿಗೂ ಅನುಕೂಲಕರವಾಗಿದೆ ಎಂದು ಅವರು ಪುನರುಚ್ಚರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !