ಹೊಸದಿಗಂತ ವರದಿ ಚಿತ್ರದುರ್ಗ
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಸಾರ್ವಜನಿಕರು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಒನಕೆ ಒಬವ್ವ ವೃತ್ತದಲ್ಲಿ ಶುಕ್ರವಾರ ಸಂಜೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ‘ಮೊಬೈಲ್ ಪೋನ್ ಟಾರ್ಚ್ ಲೈಟ್ ಮೂಲಕ ಎಸ್‌ಐಆರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಸ್‌ಐಆರ್ ಅಂಗವಾಗಿ ಬಿಎಲ್‌ಒಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಎನ್ಯುಮರೇಷನ್ (ಗಣತಿ) ಫಾರಂಗಳನ್ನು ನೀಡುತ್ತಿದ್ದಾರೆ, ಈ ಗಣತಿ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ಬಿಎಲ್‌ಒಗಳಿಗೆ ವಾಪಾಸ್ಸು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಶೇ.87ರಷ್ಟು ಎನ್ಯುಮರೇಷನ್ ಫಾರಂಗಳ ದತ್ತಾಂಶ ದಾಖಲೀಕರಣ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನುಳಿದ ಅರ್ಜಿಗಳ ವಿತರಣೆ ಮತ್ತು ಸಂಗ್ರಹಣೆಯೂ ಪ್ರಗತಿಯಲ್ಲಿದೆ. ನಾಗರಿಕರು ಸ್ವಯಂಪ್ರೇರಿತರಾಗಿ ಬಿಎಲ್‌ಒಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿಯೊಂದು ಗ್ರಾಮ ಪಂಚಾಯತ್ ಕಚೇರಿಗಳಲ್ಲಿಯೂ ವಿಶೇಷ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಅರ್ಜಿಗಳನ್ನು ಭರ್ತಿ ಮಾಡುವಾಗ ಯಾವುದೇ ಗೊಂದಲಗಳಿದ್ದರೆ ಅಥವಾ ಮಾಹಿತಿ ಬೇಕಿದ್ದರೆ ಸಾರ್ವಜನಿಕರು ಈ ಸಹಾಯ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾನದ ಹಕ್ಕು ಪಡೆಯುವುದು ಅತ್ಯಗತ್ಯ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಹಾಗೆಯೇ ನೆರೆಹೊರೆಯವರಿಗೂ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನಗರದ ಒನಕೆ ಓಬವ್ವ ವೃತ್ತದಿಂದ ಪ್ರಾರಂಭವಾದ ‘ಮೊಬೈಲ್ ಪೋನ್ ಟಾರ್ಚ್ ಲೈಟ್’ ಎಸ್‌ಐಆರ್ ಜಾಗೃತಿ ಜಾಥಾವು ಮದಕರಿ ವೃತ್ತದ ಮಾರ್ಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘಾ ರಾಜೇಂದ್ರ ಕ್ರೀಡಾಂಗಣದವರೆಗೂ ಜಾಥಾ ನಡೆಯಿತು.
ಇದನ್ನೂ ಓದಿ:
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಯೋಜನಾ ನಿರ್ದೇಶಕಿ ಕೆ.ಜಯಲಕ್ಷಮ್ಮ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಡಿಡಿಪಿಐ ಎಂ.ಆರ್.ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಸೇರಿದಂತೆ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಬ್ಬಂದಿ, ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಹಾಜರಿದ್ದರು.



