July 18, 2026
Saturday, July 18, 2026
spot_img

ಅನಧಿಕೃತ ಕಟ್ಟಡ ಆರೋಪ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ಧ್ವಂಸಗೊಳಿಸಿದ ಜಿಲ್ಲಾಡಳಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಮ್ಮೆ ಬುಲ್ಡೋಜರ್ ಸದ್ದು ಮಾಡಿದೆ. ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸೇರಿದ ಐದು ಅಂತಸ್ತಿನ ಕಚೇರಿಯನ್ನು ಅನಧಿಕೃತ ಕಟ್ಟಡ ಎಂಬ ಕಾರಣ ನೀಡಿ ಜಿಲ್ಲಾಡಳಿತವು ಶನಿವಾರ ನೆಲಸಮಗೊಳಿಸಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಆಮ್ತಲಾದಲ್ಲಿರುವ ಈ ಕಚೇರಿಯನ್ನು ಯಾವುದೇ ಅಧಿಕೃತ ಕಟ್ಟಡ ನಕ್ಷೆಯ ಅನುಮೋದನೆ ಇಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ

ಇಂದು ಶನಿವಾರ ಮುಂಜಾನೆಯೇ ಮೂರು ಬುಲ್ಡೋಜರ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿತ್ತು. ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಭಾರಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿತ್ತು.

ಇದನ್ನೂ ಓದಿ:

ನೋಟಿಸ್‌ಗೆ ಸಿಗದ ಪ್ರತಿಕ್ರಿಯೆ

ಆಡಳಿತ ಮಂಡಳಿಯ ಮೂಲಗಳ ಪ್ರಕಾರ, ಜೂನ್ 30 ಮತ್ತು ಜುಲೈ 7 ರಂದು ಕಟ್ಟಡದ ಮಾಲೀಕರಾದ ಅಭಿಷೇಕ್ ಬ್ಯಾನರ್ಜಿ ಅವರ ತಂದೆ ಅಮಿತ್ ಬ್ಯಾನರ್ಜಿಗೆ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಜುಲೈ 15 ರ ಗಡುವಿನ ಒಳಗಾಗಿ ಯಾರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ 24 ಪರಗಣ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !