ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಅಹಮದಾಬಾದ್‌ನ ಹೊರವಲಯದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಸುರಕ್ಷತಾ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈ ಹಿಂದೆಯೇ ಪರವಾನಗಿ ರದ್ದಾಗಿದ್ದರೂ, ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಪ್ರಬಲ ಸ್ಫೋಟ ಸಂಭವಿಸಿದ್ದು, ಕನಿಷ್ಠ 8 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸ್ಫೋಟದ ತೀವ್ರತೆಗೆ ಪಟಾಕಿ ತಯಾರಿಕಾ ಘಟಕದ ಇಡೀ ಕಟ್ಟಡ ಕ್ಷಣಾರ್ಧದಲ್ಲಿ ಧರಾಶಾಹಿಯಾಗಿದ್ದು, ಹಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಪರವಾನಗಿ ರದ್ದಾಗಿದ್ದರೂ ಅಕ್ರಮ ಧಂದೆ
ಈ ಪಟಾಕಿ ಕಾರ್ಖಾನೆಯು ಯಾವುದೇ ಕಾನೂನುಬದ್ಧ ಪರವಾನಗಿ ಇಲ್ಲದೆ, ಕದ್ದುಮುಚ್ಚಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಆಘಾತಕಾರಿ ಸತ್ಯ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇಲ್ಲಿ ವ್ಯಾಪಾರ ನಡೆಸಲಾಗುತ್ತಿತ್ತು.
ಭಾರಿ ಪ್ರಾಣಹಾನಿ ತಪ್ಪಿಸಿದ ಆರ್‌ಎಎಫ್
ಅದೃಷ್ಟವಶಾತ್, ದುರಂತ ನಡೆದ ಸ್ಥಳದ ಅತ್ಯಂತ ಸಮೀಪದಲ್ಲೇ ಕ್ಷಿಪ್ರ ಕಾರ್ಯಪಡೆ ಶಿಬಿರವಿತ್ತು. ಸ್ಫೋಟದ ಪ್ರಬಲ ಶಬ್ದ ಕೇಳುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಆರ್‌ಎಎಫ್ ಜವಾನರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿಯ ಕೆನ್ನಾಲಿಗೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಇವರ ಸಮಯಪ್ರಜ್ಞೆಯಿಂದಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಹಲವರನ್ನು ಸಜೀವವಾಗಿ ರಕ್ಷಿಸಲಾಗಿದ್ದು, ದೊಡ್ಡ ಮಟ್ಟದ ಪ್ರಾಣಹಾನಿ ತಪ್ಪಿದೆ.
ಇದನ್ನೂ ಓದಿ:
ಮಾಲೀಕನ ವಿರುದ್ಧ ಕಠಿಣ ಕಾನೂನು ಕ್ರಮ:
ಘಟನೆ ಸಂಭವಿಸುತ್ತಿದ್ದಂತೆಯೇ ಪೊಲೀಸರು ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಫ್ಯಾಕ್ಟರಿ ನಡೆಸಿ, ಅಮಾಯಕರ ಸಾವಿಗೆ ಕಾರಣನಾಗಿ ತಲೆಮರೆಸಿಕೊಳ್ಳಲು ಯತ್ನಿಸುತ್ತಿರುವ ಕಾರ್ಖಾನೆಯ ಮಾಲೀಕನ ವಿರುದ್ಧ ನರಹತ್ಯೆ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



