July 20, 2026
Monday, July 20, 2026
spot_img

ನೀಟ್ ಹಗರಣ, ಲಡಾಖ್ ಹಿತಾಸಕ್ತಿ: ಸೋನಮ್ ವಾಂಗ್‌ಚುಕ್ ಬೆಂಬಲಕ್ಕೆ ನಿಂತ ಭ್ರಷ್ಟಾಚಾರ ವಿರೋಧಿ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಖ್ಯಾತ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಕಳೆದ 21 ದಿನಗಳಿಂದ ನಿರಂತರ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿದ್ದ ಲಡಾಖ್‌ನ ಈ ಸಾಮಾಜಿಕ ಹೋರಾಟಗಾರನನ್ನು ದೆಹಲಿ ಪೊಲೀಸರು ತಕ್ಷಣವೇ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ

ಸೋನಮ್ ವಾಂಗ್‌ಚುಕ್ ಅವರ ಬೆಂಬಲಕ್ಕೆ ನಿಂತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಪ್ರಜಾಪ್ರಭುತ್ವ ಮಾದರಿಯ ಸರ್ಕಾರವು ಒಬ್ಬ ಸತ್ಯಾಗ್ರಹಿಯ ತಾಳ್ಮೆಯನ್ನು ಪರೀಕ್ಷಿಸುವುದು ಸರಿಯಲ್ಲ. ಅವರ ಬೇಡಿಕೆಗಳಿಗೆ ಸ್ಪಷ್ಟವಾದ ನಿರ್ಧಾರವನ್ನು ತಿಳಿಸಿ, ತಕ್ಷಣವೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ” ಎಂದು ಅವರು ಆಗ್ರಹಿಸಿದ್ದಾರೆ.

ಮಾತುಕತೆಗೆ ಹಿಂಜರಿಕೆ ಏಕೆ? – ವಿಡಿಯೋ ಸಂದೇಶ

ಈ ಕುರಿತು ವಿಶೇಷ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಹಜಾರೆ, ದೇಶದ ಪರಿಸರ ಮತ್ತು ಲಡಾಖ್ ಪ್ರಾಂತ್ಯದ ಜನರ ಹಕ್ಕುಗಳಿಗಾಗಿ ವಾಂಗ್‌ಚುಕ್ ಅವರು ಶಾಂತಿಯುತವಾಗಿ ಹೋರಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. 2011ರಲ್ಲಿ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನವು ಲೋಕಪಾಲ್ ಕಾಯ್ದೆ ಜಾರಿಗೆ ಕಾರಣವಾಗಿತ್ತು. ಇದೀಗ ಅದೇ ನಾಯಕ ವಾಂಗ್‌ಚುಕ್ ಪರ ಧ್ವನಿ ಎತ್ತಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !