July 20, 2026
Monday, July 20, 2026
spot_img

IND vs ENG ODI: ಲಾರ್ಡ್ಸ್ ಮೈದಾನದಲ್ಲಿ ಮಹಾ ಸಮರ: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಿದೆ. ಸದ್ಯ 1-1 ರಿಂದ ಸಮಬಲಗೊಂಡಿರುವ ಈ ಮೂರು ಪಂದ್ಯಗಳ ಸರಣಿಯ ಟ್ರೋಫಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿಸಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ: ಬುಮ್ರಾ ಔಟ್

ಸರಣಿ ಗೆಲ್ಲಲೇಬೇಕಾದ ಈ ಪಂದ್ಯಕ್ಕಾಗಿ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದು, ವಾಷಿಂಗ್ಟನ್ ಸುಂದರ್ ಕೂಡ ಅಲಭ್ಯರಾಗಿದ್ದಾರೆ. ಇನ್ನು ಶಿವಂ ದುಬೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರ ಬದಲಿ ಆಟಗಾರರಾಗಿ ಕೆ.ಎಲ್. ರಾಹುಲ್, ಅರ್ಷದೀಪ್ ಸಿಂಗ್ ಮತ್ತು ಯುವ ಆಟಗಾರ ಪ್ರಿನ್ಸ್ ಯಾದವ್ ತಂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲೂ ಒಂದು ಬದಲಾವಣೆ ತರಲಾಗಿದೆ.

22 ವರ್ಷಗಳ ಲಾರ್ಡ್ಸ್ ಇತಿಹಾಸ ಬದಲಿಸುತ್ತಾ ಭಾರತ?

1983ರ ವಿಶ್ವಕಪ್ ಹಾಗೂ 2002ರ ನ್ಯಾಟ್‌ವೆಸ್ಟ್ ಟ್ರೋಫಿ ಗೆದ್ದ ನೆನಪಿರುವ ಲಾರ್ಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾಗೆ ಇತ್ತೀಚಿನ ದಾಖಲೆಗಳು ಉತ್ತಮವಾಗಿಲ್ಲ. 2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಇಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ಗೆದ್ದಿತ್ತು. ಅದಾಗಿ ಬರೋಬ್ಬರಿ 22 ವರ್ಷಗಳು ಕಳೆದರೂ ಭಾರತಕ್ಕೆ ಇಲ್ಲಿ ಗೆಲುವು ಸಿಕ್ಕಿಲ್ಲ. ಈಗಾಗಲೇ ಟಿ20 ಸರಣಿ ಸೋತಿರುವ ಭಾರತ, ಈ ಪಂದ್ಯ ಗೆದ್ದು ಏಕದಿನ ಸರಣಿ ಕೈವಶ ಮಾಡಿಕೊಳ್ಳುವ ಮೂಲಕ ಪ್ರವಾಸವನ್ನು ಜಯದೊಂದಿಗೆ ಮುಗಿಸುವ ಇರಾದೆಯಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !