September 28, 2026
Monday, September 28, 2026
spot_img

ಮಳೆ ಕೈಕೊಟ್ಟ ಹಿನ್ನೆಲೆ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತ ಸಂಘದ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಳೆ ಕೈಕೊಟ್ಟಿರುವ ಪರಿಣಾಮ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್‌ನಿಂದ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮುಂಗಾರು ಮಳೆಯನ್ನು ನಂಬಿ ರೈತರು ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಮಳೆಯಿಲ್ಲದ ಪರಿಣಾಮ ಕಂಗಾಲಾಗಿರುವ ರೈತರನ್ನು ಸಾಲ ಮರುಪಾವತಿಸುವಂತೆ ಒತ್ತಾಯಿಸಬಾರದು. ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಬೆಳೆ ಪರಿಹಾರ ನೀಡಿ ಚಿಕ್ಕಬೆನ್ನೂರು ಗ್ರಾಮದ ರಿ.ಸ.ನಂ. ೬೯ ರ ಫಲಾನುಭವಿಗೆ ನಿವೇಶನ ಹಕ್ಕು ಪತ್ರ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಪ್ರತಿಭಟನಾನಿರತ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಇದನ್ನೂ ಓದಿ:

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಪಿ.ಸೂರಪ್ಪ, ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಡಿ.ಮೆದಕೇರಿಪುರ, ಉಪಾಧ್ಯಕ್ಷ ಎಂ.ಕೆ.ಚಂದ್ರಪ್ಪ, ತಾಲ್ಲೂಕು ಅಧ್ಯಕ್ಷ ಅಜ್ಜಪ್ಪ ಚಿಕ್ಕಬೆನ್ನೂರು, ಉಪಾಧ್ಯಕ್ಷ ತಣಿಗೆಹಳ್ಳಿ ಕುಮಾರಸ್ವಾಮಿ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಎನ್.ಟಿ.ಶಿವಣ್ಣ, ವಸಂತಕುಮಾರ್, ಕಾಗಲಗೆರೆ ನಿಂಗರಾಜು, ಮಂಜುನಾಥ ಬೊಮ್ಮನಹಳ್ಳಿ, ಚಂದ್ರಪ್ಪ, ಪಾಪಣ್ಣ, ನಾಗರಾಜ, ರಾಜಪ್ಪ, ಮಧುಸೂದನ್, ತಿಪ್ಪೇಸ್ವಾಮಿ, ವಿರುಪಾಕ್ಷ, ರಾಮಪ್ಪ, ರಂಗಸ್ವಾಮಿ, ಚಂದ್ರಮ್ಮ, ಓಬಮ್ಮ, ಶಾರದಮ್ಮ, ಸರಸ್ವತಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Must Read