ಹೊಸದಿಗಂತ ವರದಿ ಚಿತ್ರದುರ್ಗ:
ಜಮೀನಿನಲ್ಲಿ ತನಗೆ ಭಾಗ ಕೊಡಲಿಲ್ಲ ಎಂಬ ವಿಚಾರಕ್ಕೆ ಸಿಟ್ಟಿಗೆದ್ದ ಮಗ ತನ್ನ ತಂದೆಯನ್ನೇ ಹೊಡೆದು ಕೊಂಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕಲ್ಕುಂಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ತನ್ನ ಮಗನಿಂದ ಕೊಲೆಗೀಡಾದ ವ್ಯಕ್ತಿಯನ್ನು ಕಲ್ಕುಂಟೆ ಗ್ರಾಮದ ಚಂದ್ರಪ್ಪ ಎನ್ನಲಾಗಿದೆ.
ಘಟನೆಯ ವಿವರ:
ಚಿತ್ರದುರ್ಗ ತಾಲ್ಲೂಕಿನ ಎನ್.ಬಳ್ಳೆಕಟ್ಟೆ ಗ್ರಾಮದ ರಿ.ಸ.ನಂ.೩೦/೧೨ ರಲ್ಲಿ ಚಂದ್ರಪ್ಪ ಜಮೀನು ಹೊಂದಿದ್ದಾರೆ. ಚಂದ್ರಪ್ಪ ಹಾಗೂ ಆತನ ಮಗ ಪ್ರಸನ್ನ ಕುಮಾರನಿಗೆ ಜಮೀನಿನ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ ಚಂದ್ರಪ್ಪ ಜಮೀನಿನಲ್ಲಿ ಭಾಗ ಕೊಟ್ಟಿರಲಿಲ್ಲ. ಇದರಿಂದ ಪ್ರಸನ್ನಕುಮಾರ ತನ್ನ ತಂದೆ ಚಂದ್ರಪ್ಪನ ಮೇಲೆ ಸಿಟ್ಟಿಗೆದ್ದಿದ್ದ ಎನ್ನಲಾಗಿದೆ.
ಈ ವಿಚಾರವಾಗಿ ಚಂದ್ರಪ್ಪನ ಸಹೋದರ ಕರಿಬಸಪ್ಪ ತನ್ನ ಅಣ್ಣನ ಮಗ ಪ್ರಸನ್ನಕುಮಾರನ ಪರ ವಹಿಸಿದ್ದ. ಜಮೀನಿನಲ್ಲಿ ಭಾಗ ಕೊಡದ ತಂದೆಯನ್ನು ಕೊಲೆ ಮಾಡುವಂತೆ ಪ್ರಸನ್ನಕುಮಾರನಿಗೆ ಕರಿಬಸಪ್ಪ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ. ಇದರಿಂದ ಪ್ರಸನ್ನಕುಮಾರ ಕ್ರೋದಗೊಂಡಿದ್ದ.
ಇದನ್ನೂ ಓದಿ:
ಚಂದ್ರಪ್ಪ ಸೋಮವಾರ ತಮ್ಮ ಜಮೀನಿನ ಬಳಿ ಎಮ್ಮೆಗಳನ್ನು ಮೆಯಿಸುತ್ತಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಂದ್ರಪ್ಪನ ಬಳಿ ಬಂದ ಪ್ರಸನ್ನಕುಮಾರ ಜಮೀನಿನ ವಿಚಾರವಾಗಿ ಜಗಳ ತೆಗೆದಿದ್ದಾನೆ. ಈ ಸಂದರ್ಭದಲ್ಲಿ ಪ್ರಸನ್ನಕುಮಾರ ಕೋಲಿನಿಂದ ಚಂದ್ರಪ್ಪನ ತಲೆ ಸೇರಿದಂತೆ ಮೈ ಕೈಗೆ ಹೊಡೆದಿದ್ದಾನೆ. ಮಗನ ತೀವ್ರ ದಾಳಿಯಿಂದ ಚಂದ್ರಪ್ಪ ಸ್ಥಳದಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾನೆ.
ತಂದೆಯನ್ನು ಕೊಲೆಗೈದ ಬಳಿಕ ಪ್ರಸನ್ನಕುಮಾರ ಸ್ವತಃ ಭರಮಸಾಗರ ಪೊಲೀಸ್ ಠಾಣೆಗೆ ಹೋಗಿ ಕೊಲೆಯ ವಿಚಾರ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತ ಚಂದ್ರಪ್ಪನ ಪತ್ನಿ ಸರೋಜಮ್ಮ ಭರಮಸಾಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



