ಆರೋಗ್ಯಕರ ಜೀವನಶೈಲಿಗೆ ರಾಗಿ ಅತ್ಯುತ್ತಮ ಧಾನ್ಯ. ಕ್ಯಾಲ್ಸಿಯಂ ಮತ್ತು ನಾರಿನಂಶ ಸಮೃದ್ಧವಾಗಿರುವ ರಾಗಿಯಿಂದ ಕೇವಲ ರೊಟ್ಟಿ, ಮುದ್ದೆ ಮಾತ್ರವಲ್ಲ, ಅದ್ಭುತವಾದ ಸಂಜೆಯ ಸ್ನಾಕ್ಸ್ ಕೂಡ ಮಾಡಬಹುದು. ಎಣ್ಣೆ ತಿಂಡಿ ತಿನ್ನಲು ಹಿಂಜರಿಯುವವರು ಕೂಡ ಧೈರ್ಯವಾಗಿ ಸವಿಯಬಹುದಾದ ಗರಿಗರಿಯಾದ ‘ರಾಗಿ ಪಕೋಡ’ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ಜೀರಿಗೆ
ಅಚ್ಚಕಾರದ ಪುಡಿ
ಉಪ್ಪು
ಬಿಸಿ ಎಣ್ಣೆ / ತುಪ್ಪ
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಉದ್ದವಾಗಿ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವು, ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ, ಅದೇ ಪಾತ್ರೆಗೆ ಜೀರಿಗೆ ಮತ್ತು ಅಚ್ಚ ಖಾರದ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ 1 ಕಪ್ ರಾಗಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ 1 ಚಮಚ ಬಿಸಿ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಇದು ಪಕೋಡ ಹೆಚ್ಚು ಗರಿಗರಿಯಾಗಲು ಸಹಾಯ ಮಾಡುತ್ತದೆ. ಪಕೋಡ ಹಿಟ್ಟಿಗೆ ಒಮ್ಮೆಲೇ ನೀರು ಸುರಿಯಬಾರದು. ಕೇವಲ ಸ್ವಲ್ಪ ನೀರನ್ನು ಚಿಮುಕಿಸುತ್ತಾ, ಈರುಳ್ಳಿ ಮತ್ತು ಹಿಟ್ಟು ಒಂದಕ್ಕೊಂದು ಅಂಟಿಕೊಳ್ಳುವಂತೆ ಗಟ್ಟಿಯಾಗಿ ಕಲಸಿಕೊಳ್ಳಬೇಕು.
ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು. ಎಣ್ಣೆ ಚೆನ್ನಾಗಿ ಕಾದ ನಂತರ, ಉರಿಯನ್ನು ಮಧ್ಯಮ ಉರಿಯಲ್ಲಿ ಇಟ್ಟು, ಕಲಸಿದ ಮಿಶ್ರಣವನ್ನು ಪಕೋಡ ಆಕಾರದಲ್ಲಿ ಎಣ್ಣೆಗೆ ಬಿಡಬೇಕು. ಪಕೋಡವನ್ನು ಎರಡು ಕಡೆ ತಿರುಗಿಸಿ ಹಾಕುತ್ತಾ, ಅದು ಚೆನ್ನಾಗಿ ಬೆಂದು ಗರಿಗರಿಯಾಗುವ ತನಕ ಕರಿಯಿರಿ. ಈಗ ಬಿಸಿಬಿಸಿಯಾದ, ಪೌಷ್ಟಿಕಾಂಶಯುಕ್ತ ರಾಗಿ ಪಕೋಡ ಸವಿಯಲು ಸಿದ್ಧ.



