ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗು ಹುಟ್ಟಿದ ಮೇಲೆ ಹೆಣ್ಣಿನ ಜೀವನ ಸಂಪೂರ್ಣ ಬದಲಾಗುತ್ತದೆ. ಆದರೆ ಗಂಡಸರ ಜೀವನ ಮಾತ್ರ ಮೊದಲಿನಂತೆಯೇ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ತಾಯಿಯೊಬ್ಬಳ ನೋವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಐದು ತಿಂಗಳ ಹಸುಗೂಸು ಮತ್ತು ಶಾಲೆಗೆ ಹೋಗುವ ದೊಡ್ಡ ಮಗುವನ್ನು ನಿಭಾಯಿಸುತ್ತಾ ಹೈರಾಣಾಗಿರುವ ಮಹಿಳೆಯೊಬ್ಬಳು, ತನ್ನ ಪತಿಯ ಬೇಜವಾಬ್ದಾರಿತನದ ವಿರುದ್ಧ ಮನಬಿಚ್ಚಿ ಮಾತನಾಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸುಮಾರು ಮೂರು ನಿಮಿಷಗಳ ಈ ವಿಡಿಯೋದಲ್ಲಿ, ತಾಯಿಯೊಬ್ಬಳು ತನ್ನ ದಿನನಿತ್ಯದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾಳೆ. ಐದು ತಿಂಗಳ ಮಗು ಹಗಲಿನಲ್ಲಿ ಕೇವಲ ಇಪ್ಪತ್ತು ನಿಮಿಷಗಳಂತೆ ಮೂರು ಬಾರಿ ಮಾತ್ರ ನಿದ್ದೆ ಮಾಡುತ್ತದೆ. ಉಳಿದ ಸಮಯವೆಲ್ಲಾ ಮಗುವನ್ನು ಎತ್ತಿಕೊಂಡು ಓಡಾಡುತ್ತಲೇ ಇರಬೇಕು. ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆಯೆಂದರೆ, ಆಕೆಗೆ ನೆಮ್ಮದಿಯಿಂದ ಬಾತ್‌ರೂಮ್‌ಗೆ ಹೋಗಿ ಬರಲೂ ಸಮಯ ಸಿಗುತ್ತಿಲ್ಲವಂತೆ.
ತಾಯಿಯ ನಿಜವಾದ ನೋವಿರುವುದು ಮಗುವಿನ ನಿದ್ದೆಯ ಬಗ್ಗೆಯಲ್ಲ, ಬದಲಾಗಿ ಎರಡನೇ ಮಗು ಹುಟ್ಟಿದ ಮೇಲೂ ತನ್ನ ಗಂಡನ ಜೀವನಶೈಲಿ ಒಂದಿಷ್ಟೂ ಬದಲಾಗದಿರುವ ಬಗ್ಗೆ. ತಾನು ಮಕ್ಕಳ ಊಟ, ಶಾಲೆ, ಮನೆಕೆಲಸಗಳಲ್ಲಿ ಮುಳುಗಿಹೋಗಿದ್ದರೆ, ಪತಿ ಮಾತ್ರ ಆಫೀಸ್ ಪಾರ್ಟಿ, ಸ್ನೇಹಿತರೊಂದಿಗೆ ಸುತ್ತಾಟ ಎಂದು ಆರಾಮವಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ಎಂದೂ ಆಡದಿದ್ದ ಕ್ರಿಕೆಟ್ ಅನ್ನು ಈಗ ಪ್ರತಿ ಶುಕ್ರವಾರ ಆಡಲು ಶುರುಮಾಡಿದ್ದು, ರಾತ್ರಿ 9-10 ಗಂಟೆಯಾದರೂ ಮನೆಗೆ ಬರುವುದಿಲ್ಲ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ. “ಮ್ಯಾಚ್ ಇನ್ನೂ ಮುಗಿದಿಲ್ಲವಾ ಎಂದು ಫೋನ್ ಮಾಡಿ ಕೇಳಿದರೆ, ಮರ್ಯಾದೆಯಿಂದ ಮಾತನಾಡು ಎಂದು ನನ್ನ ಮೇಲೆಯೇ ಗದರುತ್ತಾರೆ” ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಗಂಡನ ವಿರುದ್ಧ ಎಷ್ಟೇ ಕೋಪವಿದ್ದರೂ, ಮಗುವಿನ ಮುಖ ನೋಡಿದ ತಕ್ಷಣ ಆಕೆಯ ಮನಸ್ಸು ಕರಗುತ್ತದೆ. “ಈ ಪುಟ್ಟ ಮಗುವಿಗೆ ನಾನೇನು ಹೇಳಲಿ? ಇದರ ಒಂದು ನಗುವೇ ನನ್ನೆಲ್ಲಾ ನೋವನ್ನು ಮರೆಸುತ್ತದೆ” ಎನ್ನುತ್ತಲೇ ಭಾವುಕರಾಗುತ್ತಾರೆ. ಮಹಿಳೆಯರು ತಮ್ಮ ಸಂಗಾತಿಯ ಸಹಾಯವನ್ನು ಅತಿಯಾಗಿ ನಿರೀಕ್ಷಿಸಬಾರದು ಎಂಬ ಕಿವಿಮಾತನ್ನೂ ಆಕೆ ಹೇಳಿದ್ದಾರೆ.
ಈ ವಿಡಿಯೋ ಪೋಷಕರ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಹಲವು ಮಹಿಳೆಯರು ಈ ತಾಯಿಯ ನೋವಿಗೆ ಧ್ವನಿಗೂಡಿಸಿದ್ದು, ಮನೆಯ 90% ಕೆಲಸವನ್ನು ತಾಯಂದಿರೇ ಮಾಡುತ್ತಿದ್ದರೆ, ತಂದೆಯಂದಿರು ಇಂದಿಗೂ ಬ್ಯಾಚುಲರ್‌ಗಳಂತೆ ಜೀವನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಕೆಲವರು, ಮನೆಯ ಹಿರಿಯರ ಸಹಾಯ ಪಡೆಯುವಂತೆ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ತಾಯ್ತನ ಎಂಬುದು 24 ಗಂಟೆಗಳ ನಿರಂತರ ಶ್ರಮವಾಗಿದ್ದು, ತಾಯಿಗೂ ಒಂದಿಷ್ಟು ವಿಶ್ರಾಂತಿ ಬೇಕು ಎಂಬ ಸತ್ಯವನ್ನು ಈ ವಿಡಿಯೋ ಮತ್ತೊಮ್ಮೆ ಸಮಾಜಕ್ಕೆ ನೆನಪಿಸಿದೆ.



