July 21, 2026
Tuesday, July 21, 2026
spot_img

ಪ್ರಧಾನಿ ಮನೆ ಎದುರು ʼಕೈʼ ನಾಯಕರ ಹಠಾತ್ ಧರಣಿ: ಮೋದಿ, ಅಮಿತ್ ಶಾ, ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್‌ ವಿರೋಧಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತ ನಿವಾಸದ ಎದುರು ಹಠಾತ್ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ದೆಹಲಿಯ ಹೈ-ಸೆಕ್ಯೂರಿಟಿ ವಲಯವಾಗಿರುವ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಎದುರು ನೆಲದ ಮೇಲೆ ಕುಳಿತು ಉಗ್ರ ಪ್ರತಿಭಟನೆ ನಡೆಸಿದ ನಾಯಕರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದರು.

ಪ್ರಮುಖ ನಾಯಕರ ಭಾಗಿ:

ಈ ಹಠಾತ್ ಧರಣಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ಮತ್ತು ಹಿರಿಯ ನಾಯಕರು ಭಾಗವಹಿಸಿದ್ದರು.

ಹಿನ್ನೆಲೆ:

ಸೋಮವಾರದಂದು ನೀಟ್ ಅಕ್ರಮ ಖಂಡಿಸಿ ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದರು. ಈ ಘಟನೆಯಲ್ಲಿ ಗಾಯಗೊಂಡು ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳನ್ನು ಇಂದು ಬೆಳಗ್ಗೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅದರ ಬೆನ್ನಲ್ಲೇ ಈ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.‌

ಇದನ್ನೂ ಓದಿ:

ರಾಹುಲ್ ಗಾಂಧಿ ವಾಗ್ದಾಳಿ:

“ನಿನ್ನೆ ಯುವ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ಕ್ರೂರ ವರ್ತನೆಗೆ ಪ್ರಧಾನಿ ಮೋದಿ ಅವರಿಂದ ಉತ್ತರ ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ. ದೇಶದ ಯುವಜನರ ಭವಿಷ್ಯವನ್ನು ಹಾಳುಗೆಡವಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ರಾಹುಲ್ ಗಾಂಧಿ ಅವರು ಎಕ್ಸ್ ವೇದಿಕೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ನಿವಾಸದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರನ್ನು ಮನವೊಲಿಸಿ ಧರಣಿ ಕೊನೆಗೊಳಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರೊಬ್ಬರು ಪ್ರಧಾನಿ ನಿವಾಸದ ಎದುರೇ ಹೀಗೆ ನೇರ ಧರಣಿ ಕುಳಿತಿರುವುದು ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !