ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ದಿಢೀರ್ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ದೆಹಲಿ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಇಂದು ರಾತ್ರಿಯಿಡೀ ಪ್ರಧಾನಿ ನಿವಾಸದ ಹೊರಗೆ ಧರಣಿ ಮುಂದುವರಿಸುವುದಾಗಿ ವಿರೋಧ ಪಕ್ಷಗಳ ನಾಯಕರು ಘೋಷಿಸಿದ್ದರು. ಆದರೆ, ಹೈ-ಸೆಕ್ಯೂರಿಟಿ ವಲಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಸಂಜೆ ವೇಳೆ ಭಾರಿ ಕಾರ್ಯಾಚರಣೆ ನಡೆಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
ರಸ್ತೆಯಲ್ಲೇ ಕುಳಿತ ರಾಹುಲ್:
ಇಂದು ಸಂಜೆ ಸುಮಾರು 6:40ರ ವೇಳೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಆರಂಭಿಸಿದರು. ಆದರೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ರಸ್ತೆಯ ಮೇಲೆಯೇ ಕುಳಿತು, ತಮ್ಮ ಬೇಡಿಕೆಗಳು ಈಡೇರುವವರೆಗೂ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಹೊತ್ತುಕೊಂಡು ಹೋದ ಪೊಲೀಸರು:
ಸ್ಥಳದಿಂದ ಕದಲದ ರಾಹುಲ್ ಗಾಂಧಿ ಅವರನ್ನು 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸುತ್ತುವರಿದು, ಬಲವಂತವಾಗಿ ರಸ್ತೆಯಿಂದ ಮೇಲಕ್ಕೆ ಎತ್ತಿ, ಹೊತ್ತುಕೊಂಡೇ ಹೋಗಿ ಪೊಲೀಸ್ ಬಸ್ ಹತ್ತಿಸಿದ ದೃಶ್ಯಗಳು ರಾಜಧಾನಿಯಲ್ಲಿ ತೀವ್ರ ಸಂಚಲನ ಮೂಡಿಸಿವೆ. ರಾಹುಲ್ ಜೊತೆಗೆ ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಇಂಡಿಯಾ’ ಒಕ್ಕೂಟದ ತೀವ್ರ ಆಕ್ರೋಶ:
ಪೊಲೀಸರ ಈ ಬಲವಂತದ ಕ್ರಮವನ್ನು ಕಾಂಗ್ರೆಸ್ ಹಾಗೂ ‘ಇಂಡಿಯಾ’ ಒಕ್ಕೂಟದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. “ದೇಶದ ಯುವಜನರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಮೋದಿ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳನ್ನು ಅನುಸರಿಸುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:
ಸೋಮವಾರ ನೀಟ್ ಅಕ್ರಮದ ವಿರುದ್ಧ ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಹಾಗೂ ಲಾಠಿಚಾರ್ಜ್‌ಗೆ ಆಕ್ರೋಶ ವ್ಯಕ್ತಪಡಿಸಿ ಇಂದು ಮಧ್ಯಾಹ್ನದಿಂದಲೇ ಪ್ರಧಾನಿ ನಿವಾಸದ ಎದುರು ವಿಪಕ್ಷ ನಾಯಕರು ಈ ಬೃಹತ್ ಧರಣಿ ಹಮ್ಮಿಕೊಂಡಿದ್ದರು.



