July 21, 2026
Tuesday, July 21, 2026
spot_img

ಕುಂದಾನಗರಿಯಲ್ಲಿ ಜಿಟಿ ಜಿಟಿ ಮಳೆ: ಅಸ್ತವ್ಯಸ್ತಗೊಂಡ ಜನಜೀವನ, ನದಿಗಳಿಗೆ ಹೆಚ್ಚಿದ ಒಳಹರಿವು

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ಗಡಿ ಜಿಲ್ಲೆ ಸುವರ್ಣವಿಧಾನ ಸೌಧವನ್ನು ಹೊತ್ತಿರುವ ಕುಂದಾನಗರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಜಿಟಿ ಜಿಟಿ “ತಂತುರು” ಮಳೆ ನಿರಂತರವಾಗಿ ಸುರಿಯುತ್ತಿದ್ದು, ಸಾರ್ವಜನಿಕರ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ಎರಡು ದಿನಗಳಿಂದ ಆರಂಭವಾದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ತೇವಗೊಂಡಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಗಿದೆ.

ನಿರಂತರ ಮಳೆಯಿಂದಾಗಿ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕಚೇರಿಗಳಿಗೆ ತೆರಳುವ ಉದ್ಯೋಗಿಗಳು ಪರದಾಡುವಂತಾಗಿದೆ.  ಮಾರುಕಟ್ಟೆ ಪ್ರದೇಶಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ತರಕಾರಿ, ಹಣ್ಣು ಹಾಗೂ ಸಣ್ಣ ವ್ಯಾಪಾರಿಗಳ ವಹಿವಾಟಿನ ಮೇಲೂ ಮಳೆಯ ಪರಿಣಾಮ ಕಂಡುಬಂದಿದೆ.

ತಂಪಾದ ಗಾಳಿ ಮತ್ತು ಹನಿ ಮಳೆಯ ನಡುವೆಯೇ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ನಗರದ ಹಲವು ರಸ್ತೆಗಳಲ್ಲಿ ನೀರು ಮತ್ತು ಕೆಸರು ಸಂಗ್ರಹವಾಗಿದ್ದರಿಂದ ವಾಹನ ಚಾಲಕರು ಎಚ್ಚರಿಕೆಯಿಂದ ತಮ್ಮ ವಾಹನಗಳನ್ನು ನಿದಾನವಾಗಿ  ಚಲಾಯಿಸುತ್ತಿದ್ದಾರೆ.

ಸಾರ್ವಜನಿಕರು ಕೊಡೆ ಹಾಗೂ ರೈನ್‌ಕೋಟ್‌ಗಳನ್ನು ಧರಿಸಿಕೊಂಡೇ ತಮ್ಮ ದೈನಂದಿನ ಕಾರ್ಯಗಳಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇದನ್ನೂ ಓದಿ:

ಅಲ್ಲದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ  ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಜೀವನಾಡಿಗಳಾದ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಏರಿಕೆ ಕಂಡುಬಂದಿದ್ದು, ನದಿ ತೀರದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮುಂದಿನ ಕೆಲವು ದಿನಗಳ ಕಾಲ ಜಿಲ್ಲೆಯಾದ್ಯಂತ ಇದೇ ರೀತಿಯ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಟ್ಟಾರೆಯಾಗಿ ರೈತಾಪಿ ವರ್ಗ ಸೇರಿದಂತೆ ಜನ ಜಾನುವಾರು ಗಳು ಬರಗಾಲದಿಂದ ತತ್ತರಿಸುತ್ತಿರುವ ವೇಳೆ ಮಳೆರಾಯ ಕೈಹಿಡಿದು ಮರು ಜೀವ ನೀಡಿರುವುದು ಸತ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !