ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನಗರದ ಲಾಲ್ ಚೌಕ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 12:30ಕ್ಕೆ ಉಗ್ರರು ರಕ್ತಪಾತ ನಡೆಸಿದ್ದಾರೆ. ಅಮರನಾಥ ಯಾತ್ರೆಯ ರಕ್ಷಣೆಗಾಗಿ ನಿಯೋಜನೆಗೊಂಡಿದ್ದ ಭದ್ರತಾ ಪಡೆಗಳ ಮೇಲೆ ದುಷ್ಕರ್ಮಿಗಳು ದಿಢೀರ್ ಗುಂಡಿನ ಸುರಿಮಳೆ ಗೈದಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಆಶಿಕ್ ಹುಸೇನ್ ಕುರೇಷಿ ಹುತಾತ್ಮ
ಈ ಹಠಾತ್ ದಾಳಿಯಲ್ಲಿ 35 ವರ್ಷದ ಹೆಡ್ ಕಾನ್ಸ್ಟೇಬಲ್ ಆಶಿಕ್ ಹುಸೇನ್ ಕುರೇಷಿ ಅವರು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಅನಂತನಾಗ್ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಶೀಲಿಸಿದ ವೈದ್ಯರು ಅವರು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿರುವುದಾಗಿ ದೃಢಪಡಿಸಿದರು.
ಬೃಹತ್ ಶೋಧ ಕಾರ್ಯಾಚರಣೆ ಆರಂಭ
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಭದ್ರತಾ ಪಡೆಗಳು ಇಡೀ ಲಾಲ್ ಚೌಕ್ ಪ್ರದೇಶವನ್ನು ಕಟ್ಟುನಿಟ್ಟಿನ ದಿಗ್ಬಂಧನಕ್ಕೊಳಪಡಿಸಿವೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಭಯೋತ್ಪಾದಕರ ಪತ್ತೆಗಾಗಿ ಸೇನೆ ಹಾಗೂ ಪೊಲೀಸ್ ಪಡೆಗಳು ಜಂಟಿಯಾಗಿ ವ್ಯಾಪಕ ಶೋಧ ಕಾರ್ಯವನ್ನು ಮುಂದುವರಿಸಿವೆ.



