ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ: ಕೊಟ್ಟ ಸಾಲಕ್ಕೆ ಕಾನೂನುಬಾಹಿರವಾಗಿ ಮಿತಿಮೀರಿದ ಬಡ್ಡಿ ವಸೂಲಿ ಮಾಡಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಸಂಕೇಶ್ವರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಂಕೇಶ್ವರದ ಭೀಮನಗರ ನಿವಾಸಿ ಸದಾನಂದ ಭೀಮರಾವ ಹಲಗೆ (47) ಎಂದು ಗುರುತಿಸಲಾಗಿದೆ. ಹುಕ್ಕೇರಿ ತಾಲೂಕಿನ ಕರಜಗಾ ಗ್ರಾಮದ ಸ್ನೇಹಾ ವಿಕಾಸ ಮೇಲಗೇರಿ ಅವರು ಜುಲೈ 20ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ದೂರುದಾರರು ಹಾಗೂ ಅವರ ಪತಿ ವಿಕಾಸ ಮೇಲಗೇರಿ ಅವರು 2022ರಿಂದ 2026ರ ಅವಧಿಯಲ್ಲಿ ಆರೋಪಿಯಿಂದ ಸಾಲ ಪಡೆದಿದ್ದರು.
ಸಾಲ ನೀಡುವ ವೇಳೆ ಆರೋಪಿ ನಾಲ್ಕು ಖಾಲಿ ಚೆಕ್ಗಳು ಹಾಗೂ ಹೆಚ್ಚಿನ ಮೊತ್ತ ನಮೂದಿಸಿದ ಬಾಂಡ್ ಪತ್ರಗಳನ್ನು ಪಡೆದುಕೊಂಡಿದ್ದನು. ಬಳಿಕ ಮೂರು ಚೆಕ್ಗಳನ್ನು ಹಿಂದಿರುಗಿಸಿದ್ದು, ಅಸಲು ಹಾಗೂ ಬಡ್ಡಿ ಸೇರಿ ಒಟ್ಟು ₹36,77,607 ಅನ್ನು PhonePe ಹಾಗೂ RTGS ಮೂಲಕ ಪಾವತಿಸಿದ್ದರೂ, ಇನ್ನೂ ₹4,64,000 ಹೆಚ್ಚುವರಿ ಬಡ್ಡಿ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಷ್ಟಕ್ಕೂ ತೃಪ್ತನಾಗದ ಆರೋಪಿ, ಹಣ ನೀಡದಿದ್ದರೆ “ಜೀವಸಹಿತ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಹಾಗೂ ಗೋಕಾಕ ಉಪವಿಭಾಗದ ಡಿವೈಎಸ್ಪಿ ರವಿ ಡಿ. ನಾಯ್ಕ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಇದನ್ನೂ ಓದಿ:
ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಿ. ಬಿ. ಕೊಂಗನೊಳ್ಳಿ ನೇತೃತ್ವದ ತಂಡವು ಜುಲೈ 22ರಂದು ಕಾರ್ಯಾಚರಣೆ ನಡೆಸಿ, ಕಣಗಲಾ ಗ್ರಾಮದಿಂದ ಬೇರೆಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪಿ.ಐ ಜಿ. ಬಿ. ಕೊಂಗನೊಳ್ಳಿ, ಪಿ.ಎಸ್.ಐ ವಿ. ಐ. ನಾಯಿಕ, ಯು. ಎಸ್. ಶೆಟ್ಟೆನ್ನವರ, ಎ.ಎಸ್.ಐ ಎಲ್. ಎಸ್. ಖೋತ, ಸಿಬ್ಬಂದಿಗಳಾದ ಬಿ. ಕೆ. ನಾಗನೂರಿ, ಎಸ್. ಎಲ್. ಗಳತಗಿ, ವಿ. ಬಿ. ಮುರ್ಕಿಭಾವಿ, ಎಸ್. ಎಂ. ಯಕ್ಸಂಬಿ, ವಿ. ಜಿ. ಕುಡ್ಡಗೋಳ ಹಾಗೂ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳಾದ ವಿನೋದ ಠಕ್ಕನ್ನವರ ಮತ್ತು ಸಚಿನ್ ಪಾಟೀಲ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.



