ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ: “ಕ್ಷೇತ್ರದ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಒದಗಿಸುವುದೇ ನನ್ನ ಮುಖ್ಯ ಕನಸಾಗಿದ್ದು, ಶಾಸಕನಾಗಿರುವ ಅವಧಿಯಲ್ಲಿ ಕಿತ್ತೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಎಂ.ಕೆ.ಹುಬ್ಬಳಿ ಪಟ್ಟಣದ ಶ್ರೀ ಜಗದ್ಗುರು ವೀರಸೋಮೇಶ್ವರ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಇಂದು (ಬುಧವಾರ) ತಮ್ಮ 54ನೇ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಬೃಹತ್ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಭಿವೃದ್ಧಿ ಹಾಗೂ ರಾಜಕೀಯ ಅನುಭವ ”ಕಳೆದ 25 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದು, ಸಕ್ರಿಯ ರಾಜಕೀಯ ನಡೆಸುತ್ತಿದ್ದೇನೆ. ಕಳೆದ ಐದಾರು ವರ್ಷಗಳಿಂದ ಇಂತಹ ಬೃಹತ್ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಜನಪರ ಉದ್ದೇಶಕ್ಕಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಅತ್ಯಂತ ಸಂತಸ ತಂದಿದೆ” ಎಂದರು.
ವಿರೋಧಿಗಳ ಟೀಕೆಗೆ ಸಕಾರಾತ್ಮಕ ಉತ್ತರ
”ಕಾಂಗ್ರೆಸ್ ಶಾಸಕನಾಗಿ ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದರೂ ವಿರೋಧಿಗಳು ಅಪಪ್ರಚಾರ ಮಾಡುವುದು ಸಹಜ. ಆದರೆ ಅವರ ಮಾತುಗಳಿಗೆ ಕಿವಿಗೊಡದೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುವುದೇ ನನ್ನ ಮುಖ್ಯ ಗುರಿ” ಎಂದು ಸ್ಪಷ್ಟಪಡಿಸಿದರು.ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರಮುಖ ಆದ್ಯತೆಕ್ಷೇತ್ರದಲ್ಲಿ ಪ್ರೌಢಶಾಲಾ ಹಂತದಿಂದ ಉನ್ನತ ಶಿಕ್ಷಣದವರೆಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಉದ್ಯೋಗ ಮತ್ತು ಶಿಕ್ಷಣದ ಅವಶ್ಯಕತೆಯಿದ್ದು, ತಮ್ಮ ಶಾಸಕಾವಧಿಯಲ್ಲಿ ಈ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ಅನುದಾನ ಹಂಚಿಕೆಯ 18.50 ಕೋಟಿ:
ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ವಿನಿಯೋಗ.₹3.50 ಕೋಟಿ: ಮಸೀದಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.
ಇದನ್ನೂ ಓದಿ:
2028ರ ಚುನಾವಣೆಗೆ ನೇರ ಸವಾಲು
ಉಳಿದ ಎರಡು ವರ್ಷಗಳ ಅವಧಿಯಲ್ಲಿ ಇದುವರೆಗೆ ತಂದಿರುವ ಅನುದಾನಕ್ಕಿಂತ ಹೆಚ್ಚಿನ ಹಣವನ್ನು ಸರ್ಕಾರದಿಂದ ತಂದು ಕ್ಷೇತ್ರದ ದಿನನಿತ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬೇರೆ ಪಕ್ಷಗಳ ಆಡಳಿತಾವಧಿಗೆ ಹೋಲಿಸಿದರೆ ನನ್ನ ಅವಧಿಯಲ್ಲಿ ಅನುದಾನ ಅಥವಾ ಅಭಿವೃದ್ಧಿ ಕೆಲಸ ಒಂದೇ ಒಂದು ರೂಪಾಯಿಯಷ್ಟು ಕಡಿಮೆಯಾಗಿದ್ದರೂ, 2028ರ ಚುನಾವಣೆಯಲ್ಲಿ ನನಗೆ ಮತ ನೀಡಬೇಡಿ” ಎಂದು ಮತದಾರರಿಗೆ ನೇರ ಸವಾಲು ಹಾಕಿದರು.”ನಾವು ಎಷ್ಟು ದಿನ ಅಧಿಕಾರದಲ್ಲಿರುತ್ತೇವೋ ಅಷ್ಟು ದಿನ ಜನರಿಗೆ ಒಳ್ಳೆಯದನ್ನು ಮಾಡಬೇಕು. ಮಾತಿಗಿಂತ ಕೆಲಸದ ಮೂಲಕವೇ ನಮ್ಮ ಸಾಧನೆಯನ್ನು ತೋರಿಸಬೇಕಾಗುತ್ತದೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಬೈಲಹೊಂಗಲದ ಆರಾದ್ರಿ ಮಠದ ಮಹಾಂತೇಶ ಶಾಸ್ತ್ರಿಗಳು, ಹುನಶಿಕಟ್ಟಿಯ ಶ್ರೀ ಚನ್ನಬಸವ ಶ್ರೀಗಳು, ನಿಂಚನಕಿಯ ಪಂಚಾಕ್ಷರಿ ಶ್ರೀಗಳು, ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಆರ್. ಪಾಟೀಲ, ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ ಸೇರಿದಂತೆ ಕಿತ್ತೂರು ಹಾಗೂ ನೇಸರಗಿ ಭಾಗದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.



