ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡ ಹೇಗಿರಬೇಕು ಎಂಬ ತಮ್ಮ ಆಯ್ಕೆಯನ್ನು ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ. ಯುವ ಮತ್ತು ಹಿರಿಯ ಆಟಗಾರರ ಅದ್ಭುತ ಸಂಯೋಜನೆ ಹೊಂದಿರುವ ಈ ತಂಡದಲ್ಲಿ ಹಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ರೋಹಿತ್-ವಿರಾಟ್ ಅನುಭವಕ್ಕೆ ಮಣೆ:
ವಯಸ್ಸಿನ ಕಾರಣಗಳನ್ನು ಬದಿಗಿಟ್ಟು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ಶಾಸ್ತ್ರಿ ತಂಡದಲ್ಲಿ ಉಳಿಸಿಕೊಂಡಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ರೋಹಿತ್ ಒತ್ತಡ ನಿಭಾಯಿಸುವ ಸಾಮರ್ಥ್ಯ ಹಾಗೂ ಕೊಹ್ಲಿ ಬಿಗ್-ಮ್ಯಾಚ್ ಇನ್ನಿಂಗ್ಸ್‌ಗಳು ವಿಶ್ವಕಪ್‌ಗೆ ಅತ್ಯಂತ ಅಮೂಲ್ಯ ಎಂದು ಅವರು ತಿಳಿಸಿದ್ದಾರೆ. ಇವರೊಂದಿಗೆ ಬ್ಯಾಟಿಂಗ್ ವಿಭಾಗ ಬಲಪಡಿಸಲು ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್‌ಗೆ ಸ್ಥಾನ ನೀಡಿದ್ದಾರೆ.
ಇಶಾನ್ ಕಿಶನ್‌ಗೆ ಶಾಕ್, ಪಂತ್‌ಗೆ ಮೊದಲ ಆದ್ಯತೆ:
ವಿಕೆಟ್ ಕೀಪರ್ ಸ್ಥಾನಕ್ಕಾಗಿ ರವಿಶಾಸ್ತ್ರಿ ರಿಷಭ್ ಪಂತ್‌ನನ್ನು ತಮ್ಮ ಮೊದಲ ಆದ್ಯತೆಯಾಗಿ ಆರಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಇಶಾನ್ ಕಿಶನ್‌ಗೆ ಈ 15 ಸದಸ್ಯರ ಅಂತಿಮ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ.
ಶಮಿ, ಭುವನೇಶ್ವರ್ ಕುಮಾರ್ ಅಚ್ಚರಿಯ ಆಯ್ಕೆ:
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್‌ರೊಂದಿಗೆ ಹಿರಿಯ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್‌ಗೆ ರವಿಶಾಸ್ತ್ರಿ ಬೆಂಬಲ ನೀಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಶಮಿ ಏಕದಿನ ಕ್ರಿಕೆಟ್‌ನಿಂದ ದೂರವಿದ್ದರೂ ಅವರ ಅನುಭವದ ಮೇಲೆ ಭರವಸೆ ಇಡಲಾಗಿದೆ. ಇನ್ನು 2022ರ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿರುವ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ತೋರಿರುವ ಸ್ವಿಂಗ್ ಮತ್ತು ಕಂಟ್ರೋಲ್ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ತಂಡಕ್ಕೆ ಮರಳಿ ತರಲಾಗಿದೆ.
ಇದನ್ನೂ ಓದಿ:
ರವಿಶಾಸ್ತ್ರಿ ಆಯ್ಕೆಯ 15 ಸದಸ್ಯರ ಟೀಂ ಇಂಡಿಯಾ ತಂಡ:
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ರಿಷಭ್ ಪಂತ್ (ವಿಕೆಟ್ ಕೀಪರ್), ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್.



