ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿನ ಭಾಗದಲ್ಲಿ ಇತ್ತೀಚೆಗೆ ಮಿತಿಮೀರುತ್ತಿರುವ ವನ್ಯಜೀವಿಗಳ ಹಾವಳಿ ಸಾರ್ವಜನಿಕರ ನಿದ್ದೆಗೆಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಡುಕೋಣಗಳ ಉಪಟಳ ಹೆಚ್ಚಾಗಿದ್ದು, ತೋಟ-ಜಮೀನುಗಳಿಗೆ ಹೋಗಲು ಜನರು ಭಯಪಡುವಂತಾಗಿದೆ. ಇದರ ಬೆನ್ನಲ್ಲೇ, ತಾಲೂಕಿನ ದೊನಿಹಡ್ಲು ಗ್ರಾಮದಲ್ಲಿ ಕೃಷಿ ಜಮೀನಿಗೆ ನುಗ್ಗಿದ ಕಾಡೆಮ್ಮೆಯೊಂದು ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಕೊಪ್ಪ ತಾಲೂಕಿನ ದೊನಿಹಡ್ಲು ಗ್ರಾಮದ ಸ್ಥಳೀಯ ನಿವಾಸಿ ಮಂಜುನಾಥ್ (45) ಮೃತ ದುರ್ದೈವಿ.
ಘಟನಾ ವಿವರ:
ಬುಧವಾರ ಮಧ್ಯಾಹ್ನ ಮಂಜುನಾಥ್ ತಮ್ಮ ತೋಟದ ಜಮೀನಿನಲ್ಲಿ ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ ದಟ್ಟ ಪೊದೆಯಿಂದ ಹಠಾತ್ ಆಗಿ ನುಗ್ಗಿದ ಕಾಡೆಮ್ಮೆ, ಅವರ ಮೇಲೆ ತೀವ್ರವಾಗಿ ದಾಳಿ ಮಾಡಿದ್ದು ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಮಾರ್ಗಮಧ್ಯದಲ್ಲೇ ಕೊನೆಯುಸಿರು:
ಸ್ಥಳದಲ್ಲಿದ್ದ ಇತರ ಕೃಷಿಕರು ಹಾಗೂ ಕುಟುಂಬಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ, ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಅವರು ಚಿಕಿತ್ಸೆ ಸಿಗುವ ಮುನ್ನವೇ ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹಾಗೂ ಅರಣ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ.
ಇದನ್ನೂ ಓದಿ:
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ:
ವಿಷಯ ತಿಳಿಯುತ್ತಿದ್ದಂತೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದರೆ, ಅರಣ್ಯ ಇಲಾಖೆಯ ಸಿದ್ಧ ಉತ್ತರಗಳಿಂದ ಬೇಸತ್ತಿರುವ ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.



