ಹೊಸದಿಗಂತ ವರದಿ ದಾವಣಗೆರೆ
ದಾವಣಗೆರೆ- ರಾಜ್ಯದಲ್ಲಿ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಬಿಕ್ಕಟ್ಟುಗಳ ಮಧ್ಯೆಯೂ ಕರ್ನಾಟಕದಲ್ಲಿ ಶಿಕ್ಷಣ ಸಚಿವರಿಲ್ಲದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸಂಘಟನೆ ಮುಖಂಡರು, ವಿದ್ಯಾರ್ಥಿಗಳು ಹಳೇ ಪಿ.ಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿ ತಲುಪಿ ಎಸಿ ಮುಖಾಂತರ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಇದೇ ವೇಳೆ ಎಬಿವಿಪಿ ದಕ್ಷಿಣ ಕರ್ನಾಟಕದ ಪ್ರಾಂತ್ಯ ಕಾರ್ಯದರ್ಶಿ ಗೋಪಿ ಮಾತನಾಡಿ, ರಾಜ್ಯದ ಹಲವು ಭಾಗಗಳಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳ ಕೊರತೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲಾಗದೇ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಇಲಾಖೆ ಸಮನ್ವಯದ ಕೊರತೆಯಿಂದಾಗಿ ವಿದ್ಯಾರ್ಥಿ ಪಾಸ್ ವಿತರಣೆ ವಿಳಂಬವಾಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಪ್ರಾಣದ ಹಂಗು ತೊರೆದು ಬಸ್ಸುಗಳ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುವ ಸ್ಥಿತಿ ಇದೆ ಎಂದು ದೂರಿದರು.
ಸರ್ಕಾರಿ ಹಾಸ್ಟೆಲ್ ಗಳ ಪ್ರವೇಶಾತಿ ಪ್ರಕ್ರಿಯೆ ಅಮೆಗತಿಯಲ್ಲಿ ಸಾಗಿದೆ. ಹೀಗಾಗಿ ದೂರದ ಊರುಗಳಿಂದ ಬಂದ ಬಡ ವಿದ್ಯಾರ್ಥಿಗಳು ಊಟ-ವಸತಿ ಸೌಕರ್ಯವಿಲ್ಲದೆ ಬೀದಿಪಾಲಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಸಾಲಿನಿಂದ ಬಾಕಿ ಇರುವ ವಿದ್ಯಾಸಿರಿ ಸೇರಿದಂತೆ ವಿವಿಧ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ನೆಪವೊಡ್ಡಿ ಇಲಾಖೆಗಳು ಕಾಲಹರಣ ಮಾಡುತ್ತಿವೆ. ವಿದ್ಯಾರ್ಥಿಗಳು ಕಾಲೇಜು ಶುಲ್ಕ, ಪರೀಕ್ಷಾ ಸರಣಿ ವೆಚ್ಚ ಭರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಕೂಡಲೇ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಪೂರ್ಣಗೊಳಿಸಬೇಕು. ಸಮರ್ಪಕ ಬಸ್ ಸೌಕರ್ಯ, ಸುಲಭ ರೀತಿಯಲ್ಲಿ ಪಾಸ್ ವಿತರಣೆ ಮಾಡಬೇಕು. ಸರಿಯಾದ ಸಮಯಕ್ಕೆ ಬಸ್ಸುಗಳ ವ್ಯವಸ್ಥೆ ಆಗಬೇಕು. ಹಾಸ್ಟೆಲ್ ಪ್ರವೇಶಾತಿ ಗೊಂದಲ ಸರಿಪಡಿಸಬೇಕು. ಅರ್ಹರೆಲ್ಲರಿಗೂ ಹಾಸ್ಟೆಲ್ ಸೀಟು ಹಂಚಿಕೆ ಮಾಡಿ, ಮೂಲಭೂತ ಸೌಕರ್ಯ ಸುಧಾರಿಸಬೇಕು. ಬಾಕಿ ಇರುವ ಎಲ್ಲಾ ವಿದ್ಯಾರ್ಥಿವೇತನಗಳನ್ನು ತಕ್ಷಣವೇ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು. ಇನ್ನೊಂದು ವಾರದೊಳಗೆ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಕಾಲೇಜು ಬಂದ್ ಸೇರಿದಂತೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಚ್ಚರಿಸಿದರು.
ಸಂಘಟನೆ ಮುಖಂಡರಾದ ವಿಜಯ್ ಕುಮಾರ್, ಡಾ.ಚಂದ್ರಧರ ಮರಬಾದ್, ಚಂದು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



