ಹೊಸದಿಗಂತ ಡಿಜಿಟಲ್ ಡೆಸ್ಕ್:
2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸಮೀಪ ನಡೆದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಗತ್ಯವಿದ್ದರೆ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬಹುದು ಎಂದು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ.
ಮರು ತನಿಖೆಯನ್ನು ಯಾವ ರೀತಿ ಹಾಗೂ ಯಾವ ಏಜೆನ್ಸಿ ಮೂಲಕ ನಡೆಸಬೇಕು ಎಂಬುದರ ಕುರಿತು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.
ಈ ಭೀಕರ ಘಟನೆಯ ತನಿಖೆ ಸಮರ್ಪಕವಾಗಿ ನಡೆದಿಲ್ಲ, ನೈಜ ಆರೋಪಿಗಳು ಇನ್ನೂ ಕಾನೂನಿನ ಕೈಗೆ ಸಿಕ್ಕಿಲ್ಲ ಎಂದು ಆರೋಪಿಸಿ ಸೌಜನ್ಯಾಳ ತಾಯಿ ಕುಸುಮಾವತಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ವಿಶೇಷ ತನಿಖಾ ತಂಡ ಅಥವಾ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಪ್ಪಿಸಬೇಕು ಎಂದು ಕೂಡಾ ಅವರು ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ಸೂಕ್ಷ್ಮತೆ, ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಮರುತನಿಖೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಇದೇ ವೇಳೆ ತನಿಖಾ ಸಂಸ್ಥೆಯ ಆಯ್ಕೆ, ರೂಪರೇಷೆ ಹಾಗೂ ವ್ಯಾಪ್ತಿಯ ಬಗ್ಗೆ ತೀರ್ಮಾನ ಕಾಯ್ದಿರಿಸಿಕೊಂಡಿದೆ. ಪ್ರಕರಣದ ಸಾಕ್ಷಿಗಳಿಗೆ ಈಗಾಗಲೇ ಒದಗಿಸಲಾಗಿರುವ ಭದ್ರತೆಯನ್ನು ಮುಂದುವರಿಸುವಂತೆ ಕೂಡಾ ನ್ಯಾಯಾಲಯ ನಿರ್ದೇಶನ ನೀಡಿದೆ. ವಿಚಾರಣೆಯ ಸಂದರ್ಭ ರಾಜ್ಯ ಸರ್ಕಾರದ ಪರ ವಕೀಲರು, ಅಗತ್ಯವಿದ್ದರೆ ನ್ಯಾಯಾಲಯದ ಸೂಚನೆಯ ಮೇರೆಗೆ ಎಸ್‌ಐಟಿ ರಚಿಸಿ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಪ್ರಕರಣದ ಹಿನ್ನೆಲೆ
2012ರ ಅಕ್ಟೋಬರ್ 9ರಂದು ಉಜಿರೆ ಸಮೀಪ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ನಾಪತ್ತೆಯಾಗಿದ್ದು, ನಂತರ ಆಕೆಯ ಮೃತದೇಹ ಪತ್ತೆಯಾಗಿತ್ತು. ಅತ್ಯಾಚಾರ ಹಾಗೂ ಕೊಲೆ ಆರೋಪದಡಿ ಮೊದಲು ಸಿಐಡಿ ತನಿಖೆ ನಡೆಸಿ, ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯ ಆಧಾರದ ಮೇಲೆ ನಡೆದ ವಿಚಾರಣೆಯಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು. ನಂತರ ಕರ್ನಾಟಕ ಹೈಕೋರ್ಟ್ ಕೂಡ ಆ ಖುಲಾಸೆ ತೀರ್ಪನ್ನು ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸೌಜನ್ಯ ಅವರ ತಾಯಿ ಪ್ರಕರಣದ ಮರುತನಿಖೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಹಿಂದಿನ ತನಿಖೆಗಳಲ್ಲಿ ಹಲವು ಪ್ರಮುಖ ಸಾಕ್ಷ್ಯಗಳು ಹಾಗೂ ಸುಳಿವುಗಳು ಪರಿಶೀಲನೆಯಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಿದ್ದರು.



