July 22, 2026
Wednesday, July 22, 2026
spot_img

ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ: ದಾವಣಗೆರೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹಠಾತ್ ಧರಣಿ

ಹೊಸದಿಗಂತ ವರದಿ ದಾವಣಗೆರೆ:

ದಾವಣಗೆರೆ- ಬಿಜೆಪಿ ಶಾಸಕರ ಮೇಲಿನ ಕಾಂಗ್ರೆಸ್ ಗೂಂಡಾ ವರ್ತನೆ ಖಂಡಿಸಿ ಭಾರತೀಯ ಜನತಾ ಪಾರ್ಟಿ ದಾವಣಗೆರೆ ಉತ್ತರ ಯುವ ಮೋರ್ಚಾದಿಂದ ನಗರದ ಜಯದೇವ ವೃತ್ತದಲ್ಲಿ ಬುಧವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಲಾಯಿತು.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದ ಯುವಜನತೆಯ ದಾರಿ ತಪ್ಪಿಸುತ್ತಿದ್ದಾರೆಂದು ಆಕ್ಷೇಪಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಕೈಗೊಂಡು, ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಬಿಜೆಪಿ ಶಾಸಕರ ಮೇಲೆ ಮೊಟ್ಟೆ, ರಾಡ್ ಹಾಗೂ ದೊಣ್ಣೆಗಳಿಂದ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಮಚ್ಚು, ಲಾಂಗ್, ಮೊಟ್ಟೆಗಳನ್ನು ಸಂಗ್ರಹಿಸಿಟ್ಟುಕೊಂಡು ಮಾಜಿ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ್, ಶಾಸಕರಾದ ಸಿ.ಕೆ.ರಾಮಮೂರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಹರಿಹರ ಶಾಸಕ ಬಿ.ಪಿ ಹರೀಶ್ ಗೆ ಮೊಟ್ಟೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಅಲ್ಲದೆ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ಧ್ವನಿಯನ್ನು ಹೋರಾಟದಿಂದ ಎದುರಿಸಬೇಕೇ ಹೊರತು ಹಿಂಸೆಯಿಂದಲ್ಲ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಹಿಂಸಾತ್ಮಕ ಸಂಸ್ಕೃತಿ ಬೆಳೆಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ. ರಾಜ್ಯದ ಕೊತ್ವಾಲ್ ಶಿಷ್ಯಂದಿರಾದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಡಳಿತದಲ್ಲಿ ಕಾಂಗ್ರೆಸ್ ಗೂಂಡಾ ವರ್ತನೆ ತೋರಿದ್ದಾರೆ. ಇದರ ವಿರುದ್ಧ ಬಿಜೆಪಿ ನಿಯೋಗವು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಕೂಡಲೇ ಪೊಲೀಸರು ಕಾಂಗ್ರೆಸ್ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡುವ ಪ್ರಯತ್ನವನ್ನು ಜನತೆ ಒಪ್ಪುವುದಿಲ್ಲ. ಇಂತಹ ಗೂಂಡಾ ಸರ್ಕಾರಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಇದನ್ನೂ ಓದಿ:

ಪಕ್ಷದ ಜಿಲ್ಲಾಧ್ಯಕ್ಷ ಮೆಳ್ಳೇಕಟ್ಟೆ ನಾಗರಾಜ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಆರ್.ಲಕ್ಷ್ಮಣ, ಖಜಾಂಚಿ ಹೆಚ್.ಪಿ.ವಿಶ್ವಾಸ್, ದಾವಣಗೆರೆ ಉತ್ತರ ಅಧ್ಯಕ್ಷ ತಾರೇಶ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಹರೀಶ ಶ್ಯಾಮನೂರು, ಮುಖಂಡರಾದ ಜಯರುದ್ರಪ್ಪ ಗುತ್ತೂರು ಮಂಜುನಾಥ, ಚೇತೂಬಾಯಿ, ರಾಕೇಶ ಬಜರಂಗಿ, ಗೌತಮ್ ಜೈನ್, ಕರಿಯಪ್ಪ, ಆನಂದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !