ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ರಾಜಾ ರಘುವಂಶಿ ಭೀಕರ ‘ಹನಿಮೂನ್ ಕೊಲೆ ಪ್ರಕರಣ’ಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತ್ನಿ ಸೋನಂ ರಘುವಂಶಿಗೆ ಮಂಜೂರಾಗಿದ್ದ ಜಾಮೀನನ್ನು ರದ್ದುಗೊಳಿಸಿರುವ ಸರ್ವೋಚ್ಚ ನ್ಯಾಯಾಲಯ, 3 ವಾರಗಳ ಒಳಗಾಗಿ ಪೊಲೀಸರ ಮುಂದೆ ಶರಣಾಗುವಂತೆ ಆದೇಶಿಸಿದೆ.
ಆರೋಪಗಳು ಅತ್ಯಂತ ಗಂಭೀರ
ಜಸ್ಟಿಸ್ ಎಂ.ಎಂ. ಸುಂದರೇಶ್ ಮತ್ತು ಜಸ್ಟಿಸ್ ಪಿ.ಬಿ. ವರಾಳೆಯನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ ಆದೇಶವನ್ನು ಹೊರಡಿಸಿದೆ. ಸೋನಂ ಮೇಲಿರುವ ಆರೋಪಗಳು “ಅತ್ಯಂತ ಗಂಭೀರ ಸ್ವರೂಪದ್ದಾಗಿವೆ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹನಿಮೂನ್ ಪ್ರವಾಸದ ಕೊಲೆ ಹಿನ್ನೆಲೆ
ರಾಜಾ ರಘುವಂಶಿ ಮತ್ತು ಸೋನಂ ಕಳೆದ ವರ್ಷ ಮೇ 11 ರಂದು ವಿವಾಹವಾಗಿದ್ದರು. ಮದುವೆಯಾದ ಒಂಬತ್ತೇ ದಿನಕ್ಕೆ, ಅಂದರೆ ಮೇ 20 ರಂದು ಒನ್-ವೇ ಟಿಕೆಟ್ ಪಡೆದು ಮೇಘಾಲಯಕ್ಕೆ ಹನಿಮೂನ್ ಪ್ರವಾಸ ಕೈಗೊಂಡಿದ್ದರು. ಮೂರು ದಿನಗಳ ಕಾಲ ಈಶಾನ್ಯ ಭಾರತದಲ್ಲಿ ಸುತ್ತಾಡಿದ ದಂಪತಿಗಳು ನಂತರ ನಾಪತ್ತೆಯಾಗಿದ್ದರು. ಕುಟುಂಬದವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಜೂನ್ 2 ರಂದು ಮೇಘಾಲಯದ ಕಂದಕವೊಂದರಲ್ಲಿ ರಾಜಾ ರಘುವಂಶಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತದನಂತರ ಜೂನ್ 7 ರಂದು ಗಾಜಿಪುರದ ದಾಬಾವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸೋನಂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪೊಲೀಸರ ಮುಂದೆ ಶರಣಾಗಿದ್ದಳು. ಈ ಕೊಲೆಗೆ ಸಹಕರಿಸಿದ್ದ ಆಕೆಯ ಪ್ರೇಮಿ ರಾಜ್ ಸಿಂಗ್ ಕುಶ್ವಾಹನನ್ನು ಸಹ ಬಂಧಿಸಲಾಗಿತ್ತು.
ಇದನ್ನೂ ಓದಿ:
ತಾಂತ್ರಿಕ ದೋಷದ ವಾದ ತಳ್ಳಿಹಾಕಿದ ಸುಪ್ರೀಂ ಕೋರ್ಟ್
ಶಿಲ್ಲಾಂಗ್ ಜೈಲಿನಲ್ಲಿ 10 ತಿಂಗಳು ಕಳೆದಿದ್ದ ಸೋನಂಗೆ ಈ ವರ್ಷದ ಏಪ್ರಿಲ್ 27 ರಂದು ಕೆಳ ನ್ಯಾಯಾಲಯ ಜಾಮೀನು ನೀಡಿತ್ತು. ಬಂಧನದ ಸಮಯದಲ್ಲಿ ಪೊಲೀಸರು ಕೊಲೆಗೆ ಸಂಬಂಧಿಸಿದ ಬಿಎನ್‌ಎಸ್ ಸೆಕ್ಷನ್ 103(೧) ಬದಲಿಗೆ ತಪ್ಪು ಸೆಕ್ಷನ್ ಅಡಿಯಲ್ಲಿ ದಾಖಲೆಗಳನ್ನು ಸಿದ್ಧಪಡಿಸಿದ್ದರು ಮತ್ತು ಬಂಧನದ ಸರಿಯಾದ ಕಾರಣಗಳನ್ನು ಆಕೆಗೆ ತಿಳಿಸಿರಲಿಲ್ಲ ಎಂಬ ತಾಂತ್ರಿಕ ಕಾರಣವನ್ನು ಕೆಳ ನ್ಯಾಯಾಲಯ ಎತ್ತಿಹಿಡಿದಿತ್ತು. ಮೇಘಾಲಯ ಹೈಕೋರ್ಟ್ ಸಹ ಈ ಆದೇಶವನ್ನು ಎತ್ತಿಹಿಡಿದಿತ್ತು. ಆದರೆ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಈ ತಾಂತ್ರಿಕ ದೋಷದ ವಾದವನ್ನು ತಳ್ಳಿಹಾಕಿ ಜಾಮೀನು ರದ್ದುಪಡಿಸಿದೆ. ಇದಕ್ಕೂ ಮುನ್ನ ಕೋರ್ಟ್ ಸೋನಂಗೆ ಸ್ವಇಚ್ಛೆಯಿಂದ ಶರಣಾಗುವ ಅಥವಾ ಜಾಮೀನು ರದ್ದತಿ ಆದೇಶ ಎದುರಿಸುವ ಎರಡು ಆಯ್ಕೆಗಳನ್ನು ನೀಡಿತ್ತು.



