ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ: ದಶಕಗಳಿಂದ ನಿರೀಕ್ಷಿಸಲಾಗಿದ್ದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕಾಲ್ಪನಿಕ ವೇತನ ಹಾಗೂ ಪಿಂಚಣಿ ಸೌಲಭ್ಯಗಳ ವಿಚಾರದಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಅನುದಾನಿತ ನೌಕರರ ಪರವಾಗಿ ತೀರ್ಪು ನೀಡಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅನುದಾನಿತ ನೌಕರರ ಕಾಲ್ಪನಿಕ ವೇತನ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಎಲ್ಲ ಮೇಲ್ಮನವಿಗಳನ್ನು ನ್ಯಾಯಾಲಯ ವಜಾಗೊಳಿಸಿರುವುದು ಅನುದಾನಿತ ನೌಕರರ ದಶಕಗಳ ಹೋರಾಟಕ್ಕೆ ಸಂದ ಮಹತ್ವದ ಜಯವಾಗಿದೆ ಎಂದರು.
ಅನುದಾನಿತ ನೌಕರರ ಕಾಲ್ಪನಿಕ ವೇತನ ಹಾಗೂ ಇತರ ಸೌಲಭ್ಯಗಳಿಗಾಗಿ ತಾವು ಸಹ ಸದನದ ಒಳಗೂ ಹೊರಗೂ ನಿರಂತರ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾಗಿ ಹೇಳಿದ್ದಾರೆ.ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ ಎಂಬ ನೆಪವೊಡ್ಡಿ ಸರ್ಕಾರ ಈ ವಿಷಯವನ್ನು ದೀರ್ಘಕಾಲ ಕಾಲಹರಣ ಮಾಡುತ್ತ ಬಂದಿತ್ತು. ಆದರೆ ಇದೀಗ ವಿಭಾಗೀಯ ಪೀಠವು ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದು ಅನುದಾನಿತ ನೌಕರರ ಹಿತವನ್ನು ಕಾಪಾಡಿದೆ ಎಂದರು.
ಇದನ್ನೂ ಓದಿ:
ರಾಜ್ಯ ಸರ್ಕಾರವು ನ್ಯಾಯಾಲಯದ ತೀರ್ಪನ್ನು ಗೌರವಿಸಿ, ಅನುದಾನಿತ ನೌಕರರ ಅನುದಾನರಹಿತ ಅವಧಿಯ ಹಿಂದಿನ ಸೇವೆಯನ್ನು ಪರಿಗಣಿಸಿ ಅದರ ಆಧಾರದ ಮೇಲೆ ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.



