ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಕೆಲಸದ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡುವ ಜಾಲವೊಂದು ರಾಜಧಾನಿಯಲ್ಲಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆ ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನಿಯ ಹಿರಿಯ ವ್ಯವಸ್ಥಾಪಕರೊಬ್ಬರಿಗೆ ಬರೋಬ್ಬರಿ 26 ಲಕ್ಷ ರೂ.ವಂಚಿಸಲಾಗಿದೆ.
ವೈಟ್ಫೀಲ್ಡ್ನ ಖಾಸಗಿ ಗೋಲ್ಡ್ ಫರ್ಮ್ನಲ್ಲಿ ಕೆಲಸ ಮಾಡುತ್ತಿರುವ ಜಿ.ಕೆ. ರಘುನಂದನ್ (36) ಎಂಬುವರೇ ಹಣ ಕಳೆದುಕೊಂಡ ದುರ್ದೈವಿ. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಂತೋಷ್ ಹೊಸಮನಿ ಸೇರಿದಂತೆ ನಾಲ್ವರ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ.
50 ಲಕ್ಷಕ್ಕೆ ಫಿಕ್ಸ್ ಆಗಿದ್ದ ಡೀಲ್
ಸಂತ್ರಸ್ತ ರಘುನಂದನ್ಗೆ 2024ರ ಡಿಸೆಂಬರ್ನಲ್ಲಿ ಸಂತೋಷ್ ಹೊಸಮನಿ ಎಂಬಾತನ ಪರಿಚಯವಾಗಿತ್ತು. ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ (DPAR) ಪ್ರಭಾವಿ ಹುದ್ದೆಯಲ್ಲಿದ್ದು, ಕೆಪಿಎಸ್ಸಿ (KPSC) ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದಾಗಿ ಸಂತೋಷ್ ನಂಬಿಸಿದ್ದ. ಇದನ್ನು ನಿಜವೆಂದು ನಂಬಿದ ರಘುನಂದನ್ಗೆ ಪಿಡಿಒ ಹುದ್ದೆ ಕೊಡಿಸಲು ಆರೋಪಿ 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ. ಮುಂಗಡವಾಗಿ ಹಂತ ಹಂತವಾಗಿ ಒಟ್ಟು 26 ಲಕ್ಷ ರೂ. ನಗದನ್ನು ಆರೋಪಿಗಳು ವಸೂಲಿ ಮಾಡಿದ್ದರು.
ಕೆಪಿಎಸ್ಸಿ ಕಚೇರಿ ಲ್ಯಾಂಡ್ಲೈನ್ ದುರ್ಬಳಕೆ
ಹಣ ನೀಡಿದ ಮೇಲೂ ನೇಮಕಾತಿ ಆದೇಶ ಪತ್ರ ಬಾರದೇ ಇದ್ದಾಗ ರಘುನಂದನ್ ಆರೋಪಿಯನ್ನು ತೀವ್ರವಾಗಿ ಪ್ರಶ್ನಿಸಲು ಆರಂಭಿಸಿದ್ದರು. ಈ ವೇಳೆ ಸಂಶಯ ಬಾರದಂತೆ ತಡೆಯಲು ಆರೋಪಿಗಳು ಹೈಟೆಕ್ ತಂತ್ರ ಬಳಸಿದ್ದರು. ಕೆಪಿಎಸ್ಸಿ ಕಚೇರಿಯ ಅಧಿಕೃತ ಲ್ಯಾಂಡ್ಲೈನ್ ಸಂಖ್ಯೆಗಳನ್ನೇ ಹೋಲುವ ನಂಬರ್ಗಳಿಂದ ‘ರಾವ್’ ಎಂಬ ವ್ಯಕ್ತಿ ರಘುನಂದನ್ಗೆ ಕರೆ ಮಾಡಿ, “ನಿಮ್ಮ ದಾಖಲೆಗಳ ಪರಿಶೀಲನೆ ಮುಗಿದಿದೆ, ಪಿಡಿಒ ಕೆಲಸ ಖಚಿತವಾಗಿದೆ” ಎಂದು ಹಲವು ಬಾರಿ ಭರವಸೆ ನೀಡಿದ್ದ. ಆದರೆ, ದಿನಗಳು ಕಳೆದರೂ ಆರ್ಡರ್ ಕಾಪಿ ಸಿಗದೆ, ಆರೋಪಿ ಸಂತೋಷ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಾಗ ತಾನು ಮೋಸ ಹೋಗಿರುವುದು ರಘುನಂದನ್ಗೆ ಅರಿವಾಗಿದೆ.
ಇದನ್ನೂ ಓದಿ
ವಿಧಾನಸೌಧ ಠಾಣೆಯಲ್ಲಿ ನಾಲ್ವರ ವಿರುದ್ಧ ಕೇಸ್ ದಾಖಲು
ತಾನು ಸಂಪೂರ್ಣವಾಗಿ ವಂಚನೆಗೆ ಒಳಗಾಗಿರುವುದನ್ನು ಅರಿತ ರಘುನಂದನ್ ತಕ್ಷಣವೇ ವಿಧಾನಸೌಧ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಮುಖ ಆರೋಪಿ ಸಂತೋಷ್ ಹೊಸಮನಿ, ನಕಲಿ ಕರೆ ಮಾಡಿದ ರಾವ್, ಸಹಚರರಾದ ಮಹೇಶ್ ಕುಮಾರ್ ಮತ್ತು ಬಸವರಾಜ್ ಎಂಬ ನಾಲ್ವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳ ಲ್ಯಾಂಡ್ಲೈನ್ ಸಂಖ್ಯೆಗಳನ್ನು ಬಳಸಿ ನಕಲಿ ಕರೆ ಮಾಡಿರುವುದು ಹೇಗೆ ಮತ್ತು ಈ ಜಾಲದ ಹಿಂದೆ ಕೆಪಿಎಸ್ಸಿ ಒಳಗಿನ ಯಾರಾದರೂ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



