ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಬೆಳವಣಿಗೆ ನಡೆದಿದ್ದು, ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಟ ದರ್ಶನ್ ಪರ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪ್ರದೋಷ್ ಅವರ ಸಾಕ್ಷ್ಯ ದಾಖಲಿಸುವ ವಿಚಾರದಲ್ಲಿ ದರ್ಶನ್ ಎತ್ತಿದ್ದ ಆಕ್ಷೇಪಗಳಿಗೆ 59ನೇ ಸಿಸಿಹೆಚ್ ನ್ಯಾಯಾಲಯ ಸ್ಪಷ್ಟ ತೀರ್ಪು ನೀಡಿದೆ.
ಪ್ರದೋಷ್ ಅವರನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಅವರು ಯಾರೊಂದಿಗೂ ಮಾತನಾಡದಂತೆ ನಿರ್ಬಂಧ ವಿಧಿಸಬೇಕು ಎಂದು ದರ್ಶನ್ ಪರ ವಕೀಲರು ಒಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 267 ಹಾಗೂ ಬಿಎನ್‌ಎಸ್‌ಎಸ್‌ನ ಸೆಕ್ಷನ್ 302 ಅನ್ನು ಉಲ್ಲೇಖಿಸಲಾಗಿತ್ತು.
ಪ್ರದೋಷ್ ಸಾಕ್ಷ್ಯಕ್ಕೆ ಆಕ್ಷೇಪ ಎತ್ತಿದ್ದ ವಕೀಲರು
ಇದೇ ವೇಳೆ, ಪ್ರದೋಷ್ ಅವರ ಸಾಕ್ಷ್ಯ ದಾಖಲಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 137 ಮತ್ತು 138 ಅಡಿಯಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು. ಸಾಕ್ಷ್ಯ ದಾಖಲಿಸುವ ಮೊದಲ ದಿನ ತಮಗೆ ನೆನಪಾಗದ ಕೆಲವು ವಿಚಾರಗಳನ್ನು ಪ್ರದೋಷ್ ಅವರು ಮುಂದಿನ ದಿನ ಹೇಳಲು ಮುಂದಾಗಿದ್ದಾರೆ. ಹೀಗಾಗಿ ಮೊದಲ ದಿನ ಹೇಳದೆ ಉಳಿದ ಅಂಶಗಳನ್ನು ನಂತರ ಸೇರಿಸಲು ಅವಕಾಶ ನೀಡಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು.
ಪ್ರದೋಷ್ ಅವರು ನಂತರ ನೀಡಿದ ಹೇಳಿಕೆಗಳಲ್ಲಿನ ನಿರ್ದಿಷ್ಟ ಅಂಶಗಳನ್ನು ಸಾಕ್ಷ್ಯದ ದಾಖಲೆಯಿಂದ ತೆಗೆದುಹಾಕಬೇಕು ಎಂಬುದು ದರ್ಶನ್ ವಕೀಲರ ಪ್ರಮುಖ ಮನವಿಯಾಗಿತ್ತು. ಈ ವಿಚಾರದಲ್ಲಿ ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ 59ನೇ ಸಿಸಿಹೆಚ್ ನ್ಯಾಯಾಲಯ ದರ್ಶನ್ ಪರ ಸಲ್ಲಿಸಲಾಗಿದ್ದ ಎರಡೂ ಅರ್ಜಿಗಳನ್ನು ವಜಾಗೊಳಿಸಿದೆ.
ಇದನ್ನೂ ಓದಿ:
ನಾಳೆಯೂ ಮುಂದುವರಿಯಲಿದೆ ಪ್ರದೋಷ್ ಸಾಕ್ಷ್ಯ
ಅರ್ಜಿಗಳು ತಿರಸ್ಕೃತವಾದರೂ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅವರ ಸಾಕ್ಷ್ಯ ದಾಖಲಿಸುವ ಕಾರ್ಯ ನಾಳೆಯೂ ಮುಂದುವರಿಯಲಿದೆ. ಹೀಗಾಗಿ ಮುಂದಿನ ವಿಚಾರಣೆಯಲ್ಲಿ ಪ್ರದೋಷ್ ನೀಡುವ ಹೇಳಿಕೆಗಳು ಪ್ರಕರಣದ ಬೆಳವಣಿಗೆಯಲ್ಲಿ ಮತ್ತಷ್ಟು ಮಹತ್ವ ಪಡೆಯುವ ಸಾಧ್ಯತೆಯಿದೆ.
ಇದರ ನಡುವೆ, ಜೈಲು ಅಧಿಕಾರಿಗಳ ವಿರುದ್ಧ ಪ್ರದೋಷ್ ಸಲ್ಲಿಸಿರುವ ಕುಟುಂಬ ಸದಸ್ಯರ ಭೇಟಿಗೆ ಅನುಮತಿ ನಿರಾಕರಿಸಿದ ವಿಚಾರದ ಅರ್ಜಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ಸೂಚಿಸಿದೆ. ಈ ಅರ್ಜಿಯ ಮೇಲಿನ ಆದೇಶವೂ ನಾಳೆ ಪ್ರಕಟವಾಗಲಿದೆ.
ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ ಅರ್ಜಿಗೂ ನಾಳೆ ತೀರ್ಪು
ಮತ್ತೊಂದೆಡೆ, ಬ್ಯಾರಕ್ ಬದಲಾವಣೆಗೆ ಸಂಬಂಧಿಸಿದಂತೆ ಪವಿತ್ರಾ ಗೌಡ ಸಲ್ಲಿಸಿರುವ ಮನವಿಗೆ ಜೈಲು ಅಧಿಕಾರಿಗಳು ಅವರ ಆರೋಗ್ಯ ವರದಿಯನ್ನು ಇ-ಮೇಲ್ ಮೂಲಕ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ. ಈ ವಿಚಾರದಲ್ಲಿಯೂ ನ್ಯಾಯಾಧೀಶರು ನಾಳೆ ಆದೇಶ ಪ್ರಕಟಿಸುವ ನಿರೀಕ್ಷೆಯಿದೆ.



