July 25, 2026
Saturday, July 25, 2026
spot_img

ವೈನ್ ನಗರಿ ಬೋರ್ಡೋಗೆ ಕಾಳ್ಗಿಚ್ಚಿನ ಭೀತಿ: ವಿಮಾನ ನಿಲ್ದಾಣ ಸೇರಿದಂತೆ 3 ಉಪನಗರಗಳ ತುರ್ತು ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವಪ್ರಸಿದ್ಧ ವೈನ್ ಉತ್ಪಾದನಾ ಕೇಂದ್ರವಾದ ಫ್ರಾನ್ಸ್‌ನ ಬೋರ್ಡೋ ನಗರದತ್ತ ಭೀಕರ ಕಾಳ್ಗಿಚ್ಚು ವೇಗವಾಗಿ ಮುನ್ನುಗ್ಗುತ್ತಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ‌ ಇಂದು ಶನಿವಾರ ಮುಂಜಾನೆ ಅಧಿಕಾರಿಗಳು ಬೋರ್ಡೋ ನಗರದ ವಿಮಾನ ನಿಲ್ದಾಣ ಸೇರಿದಂತೆ ಪಶ್ಚಿಮ ಭಾಗದ ಮೂರು ಪ್ರಮುಖ ಉಪನಗರಗಳ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಗೊಳ್ಳುವಂತೆ ತುರ್ತು ಆದೇಶ ಹೊರಡಿಸಿದ್ದಾರೆ.

ಜಿರೊಂಡೆ ಪ್ರಾಂತ್ಯದ ಮುಖ್ಯಸ್ಥರು (ಪ್ರಿಫೆಕ್ಟ್) ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರು ಬೆಂಕಿ ನಿರಂತರವಾಗಿ ಹರಡುತ್ತಿದೆ. ಸಾರ್ವಜನಿಕರ ಜೀವ ರಕ್ಷಣೆಗಾಗಿ ಪೀಡಿತ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ದಿಕ್ಕುತೋಚದಂತಾದ ಅಧಿಕಾರಿಗಳು:

ಹೆಚ್ಚಿನ ತಾಪಮಾನ ಮತ್ತು ಹವಾಮಾನ ವೈಪರೀತ್ಯದ ದೀರ್ಘಕಾಲೀನ ಪರಿಣಾಮಗಳಿಂದಾಗಿ ಈ ಬಾರಿ ಕಾಳ್ಗಿಚ್ಚು ಅತಿ ಉಗ್ರ ರೂಪ ಪಡೆದಿದೆ. ಬೆಂಕಿಯ ಹರಡುವಿಕೆ ಮತ್ತು ಹಿಂಸಾತ್ಮಕ ರೂಪವನ್ನು ಕಂಡು ಫ್ರಾನ್ಸ್ ಮತ್ತು ಸ್ಪೇನ್ ದೇಶಗಳ ಅಗ್ನಿಶಾಮಕ ದಳದವರು ಅಕ್ಷರಶಃ ಬೆಚ್ಚಿಬೀಳುವಂತಾಗಿದೆ. “ಬೆಂಕಿ ಎಷ್ಟು ವೇಗವಾಗಿ ಮುನ್ನುಗ್ಗುತ್ತಿದೆ ಎಂದರೆ ಅದನ್ನು ನೇರವಾಗಿ ಎದುರಿಸಿ ನಂದಿಸಲು ಸಾಧ್ಯವಾಗುತ್ತಿಲ್ಲ” ಎಂದು ಸ್ಪೇನ್ ಅಗ್ನಿಶಾಮಕ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ದೋಣಿಗಳ ಮೂಲಕ ಪ್ರಾಣ ಉಳಿಸಿಕೊಂಡ ಜನ:

ಅಟ್ಲಾಂಟಿಕ್ ಕರಾವಳಿಯ ಪ್ರವಾಸಿ ಪಟ್ಟಣಗಳಿಗೆ ಜ್ವಾಲೆಗಳು ನುಗ್ಗಿದಾಗ, ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ನೂರಾರು ಪ್ರವಾಸಿಗರು ಮತ್ತು ಸ್ಥಳೀಯರು ಸಮುದ್ರದ ಮಾರ್ಗವಾಗಿ ದೋಣಿಗಳ (Boats) ಮೂಲಕ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ:

2 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ:

ನೈಋತ್ಯ ಫ್ರಾನ್ಸ್ ಮತ್ತು ಮಧ್ಯ ಸ್ಪೇನ್‌ನಾದ್ಯಂತ ಕಾಳ್ಗಿಚ್ಚಿನ ಅಬ್ಬರಕ್ಕೆ ಇದುವರೆಗೆ ಒಟ್ಟು 2,00,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಫ್ರೆಂಚ್ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಜಿರೊಂಡೆ ಮತ್ತು ಲ್ಯಾಂಡೆಸ್ ಪ್ರಾಂತ್ಯಗಳಲ್ಲೇ ಸುಮಾರು 1,41,000 ಜನರು ನಿರಾಶ್ರಿತರಾಗಿದ್ದಾರೆ. ಇತ್ತ ನೆರೆಯ ಸ್ಪೇನ್‌ನಲ್ಲಿ ಮ್ಯಾಡ್ರಿಡ್ ಸುತ್ತಮುತ್ತಲಿನ ಒಟ್ಟು 60,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !