August 19, 2026
Wednesday, August 19, 2026
spot_img

ಬಾಂಗ್ಲಾದೇಶ ರಾಜಕೀಯದಲ್ಲಿ ಸಂಚಲನ: ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ದಿಢೀರ್ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ 22ನೇ ಅಧ್ಯಕ್ಷರಾಗಿದ್ದ 76 ವರ್ಷದ ಮೊಹಮ್ಮದ್ ಶಹಾಬುದ್ದೀನ್ ಅವರು ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಮ್ಮ ಶಾರೀರಿಕ ಹಾಗೂ ಮಾನಸಿಕ ಅಸಮರ್ಥತೆಯನ್ನು ಉಲ್ಲೇಖಿಸಿ ನಿರ್ಗಮಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ, ತಾವು ‘ಆಟೋನಾಮಿಕ್ ನ್ಯೂರೋಪತಿ’ ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆಗಾಗ್ಗೆ ಪ್ರಜ್ಞೆ ತಪ್ಪುತ್ತಿರುವುದಾಗಿ ತಿಳಿಸಿದ್ದಾರೆ.

ಶೇಖ್ ಹಸೀನಾ ಆಡಳಿತ ಮತ್ತು ದಂಗೆಯ ನೆರಳು

ಏಪ್ರಿಲ್ 2023ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮಾಜಿ ನ್ಯಾಯಾಧೀಶ ಶಹಾಬುದ್ದೀನ್, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿಕಟವರ್ತಿಯಾಗಿದ್ದರು. 2024ರ ವಿದ್ಯಾರ್ಥಿ ದಂಗೆಯ ನಂತರ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರೂ, ಶಹಾಬುದ್ದೀನ್ ಅಧ್ಯಕ್ಷರಾಗಿ ಮುಂದುವರಿದಿದ್ದರು. ಶಹಾಬುದ್ದೀನ್ ಅವರು ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿದ್ದರೂ, 17.3 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕಾರ್ಯಾಂಗದ ನೈಜ ಅಧಿಕಾರ ಪ್ರಧಾನಿ ಮತ್ತು ಸಂಪುಟದ ಬಳಿಯೇ ಇದೆ.

ಯೂನಸ್ ಸರ್ಕಾರ ಹಾಗೂ ಹಸೀನಾ ವಾಪಸಾತಿ

ಹಸೀನಾ ಅವರ ಪತನದ ಬಳಿಕ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಈ ಸರ್ಕಾರವು ‘ಇಂಟರ್ ನ್ಯಾಷನಲ್ ಕ್ರೈಮ್ಸ್ ಟ್ರಿಬ್ಯೂನಲ್’ ಕಾಯಿದೆಗೆ ತಿದ್ದುಪಡಿ ತಂದು, ಹಸೀನಾ ಸರ್ಕಾರದ ಅವಧಿಯ ಅಪರಾಧಗಳ ವಿಚಾರಣೆಗೆ ಹೆಚ್ಚಿನ ಅಧಿಕಾರ ನೀಡಿತು. ಇದೀಗ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಈ ವರ್ಷಾಂತ್ಯಕ್ಕೆ ಬಾಂಗ್ಲಾಗೆ ಮರಳಲು ಯೋಜಿಸಿದ್ದು, ದೇಶಕ್ಕೆ ಬಂದ ತಕ್ಷಣ ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಸ್ತುತ ಸರ್ಕಾರ ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !