ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಮೀನನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗ ಸೃಷ್ಟಿ ಹಾಗೂ ಪಂಚಾಯಿತಿಗಳ ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಯೋಜನೆ ರೂಪಿಸುತ್ತಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಮಿಯಲ್ಲಿ ಫಲವೃಕ್ಷ ತೋಟಗಳನ್ನು ಬೆಳೆಸಿ, ಅವುಗಳನ್ನು ವಾರ್ಷಿಕ ಗುತ್ತಿಗೆ ಮೂಲಕ ಸ್ಥಳೀಯ ಯುವಕರಿಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಜಮೀನಿನಲ್ಲಿ ಫಲತೋಟ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಮಾವು, ಸಪೋಟ, ತೆಂಗು, ಹುಣಸೆ, ನೇರಳೆ ಸೇರಿದಂತೆ ವಿವಿಧ ಫಲವೃಕ್ಷಗಳನ್ನು ಬೆಳೆಸುವ ಮೂಲಕ ಹಸಿರು ವಿಸ್ತಾರ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಇದನ್ನೂ ಓದಿ:
ಅಭಿವೃದ್ಧಿಪಡಿಸಿದ ಫಲತೋಟಗಳನ್ನು ಪ್ರತಿ ವರ್ಷ ಪಾರದರ್ಶಕ ಹರಾಜು ಮೂಲಕ ಅದೇ ಗ್ರಾಮದ ನಿರುದ್ಯೋಗಿ ಹಾಗೂ ಭೂರಹಿತ ಯುವಕರಿಗೆ ಗುತ್ತಿಗೆ ನೀಡುವ ಪ್ರಸ್ತಾವನೆ ಮಾಡಲಾಗಿದೆ.
ಪಂಚಾಯಿತಿಗಳಿಗೆ ಹೆಚ್ಚುವರಿ ಆದಾಯ
ಈ ಯೋಜನೆಯಿಂದ ಸರ್ಕಾರಿ ಭೂಮಿ ಒತ್ತುವರಿ ತಡೆಯುವುದರ ಜೊತೆಗೆ ಫಲಗಳ ಹರಾಜಿನ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿ ಆದಾಯ ದೊರೆಯಲಿದೆ. ಅಗತ್ಯವಿದ್ದರೆ ಭವಿಷ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಯನ್ನು ಬಳಸಿಕೊಳ್ಳಲು ಅವಕಾಶವೂ ಇರಲಿದೆ.
ರಸ್ತೆ ಬದಿಯಲ್ಲೂ ಫಲವೃಕ್ಷಗಳು
ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ ಹಾಗೂ ಸಂಪರ್ಕ ಮಾರ್ಗಗಳ ಎರಡೂ ಬದಿಯಲ್ಲಿ ಫಲವೃಕ್ಷಗಳನ್ನು ನೆಟ್ಟು, ಅದರ ಫಲವನ್ನು ವಾರ್ಷಿಕ ಗುತ್ತಿಗೆ ಮೂಲಕ ಸ್ಥಳೀಯರಿಗೆ ನೀಡುವ ಯೋಜನೆಯೂ ಪ್ರಸ್ತಾಪಿಸಲಾಗಿದೆ. ಈ ಯೋಜನೆ ಜಾರಿಗೆ ಕಂದಾಯ, ಅರಣ್ಯ ಇಲಾಖೆ ಹಾಗೂ ಸಂಬಂಧಿತ ಸಂಸ್ಥೆಗಳ ಸಹಯೋಗದಲ್ಲಿ ಕ್ರಿಯಾಯೋಜನೆ ರೂಪಿಸುವಂತೆ ಸಚಿವರು ಸೂಚಿಸಿದ್ದಾರೆ.



