October 11, 2026
Sunday, October 11, 2026
spot_img

120 ದಿನಗಳಲ್ಲೇ ಸಿಎಂ ವಿಜಯ್‌ರನ್ನು ಜಡ್ಜ್ ಮಾಡಬೇಡಿ, 1 ವರ್ಷ ಟೈಮ್ ಕೊಡಿ: ನಟ ಪ್ರಕಾಶ್ ರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 120 ದಿನಗಳಾಗಿವೆ. ಅಷ್ಟು ಬೇಗ ಅವರ ಆಡಳಿತವನ್ನು ಅಳೆಯುವುದು ತಪ್ಪು, ಅವರಿಗೆ ಕನಿಷ್ಠ ಒಂದು ವರ್ಷದ ಸಮಯ ಕೊಡಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಒಂದು ವೇಳೆ ಒಂದು ವರ್ಷದ ನಂತರವೂ ವಿಜಯ್ ಸರ್ಕಾರ ಸರಿಯಾಗಿ ಕೆಲಸ ಮಾಡದಿದ್ದರೆ ನಾನೇ ಅವರನ್ನು ನೇರವಾಗಿ ಪ್ರಶ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಪ್ರಕಾಶ್ ರಾಜ್ ಹೇಳಿದ್ದೇನು?

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, “ವಿಜಯ್ ಅವರಿಗೆ ವೋಟ್ ಹಾಕಿದವರಿಗೂ ಮತ್ತು ಹಾಕದವರಿಗೂ ಅವರೇ ಈಗ ಮುಖ್ಯಮಂತ್ರಿ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ನಾವು ಗೌರವಿಸಬೇಕು. ಚುನಾವಣೆಗೂ ಮುನ್ನ ವಿಜಯ್ ಬಗ್ಗೆ ನನಗೂ ಹಲವು ಸಂಶಯಗಳಿದ್ದವು, ಅದನ್ನು ನಾನು ಮುಕ್ತವಾಗಿ ಹೇಳಿದ್ದೆ. ಆದರೆ ಈಗ ಅವರು ಅಧಿಕಾರಕ್ಕೆ ಬಂದಿದ್ದಾರೆ, ನಾನು ಅವರ ಮೊದಲ ಬಜೆಟ್ ನೋಡಲು ಕಾಯುತ್ತಿದ್ದೇನೆ. ನಮಗೆ ಅಧಿಕಾರದಲ್ಲಿರುವವರು ಇಷ್ಟವಿಲ್ಲ ಎಂದ ತಕ್ಷಣ ತರಾತುರಿಯಲ್ಲಿ ಟೀಕೆ ಮಾಡುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯ್ ವಿದೇಶಿ ಪ್ರವಾಸ,ಅಜಿತ್ ಭೇಟಿಗೆ ಬೆಂಬಲ

ಇತ್ತೀಚೆಗೆ ಮುಖ್ಯಮಂತ್ರಿ ವಿಜಯ್ ಅವರು ವಿದೇಶಕ್ಕೆ ಹೋಗಿ ನಟ ಅಜಿತ್ ಅವರನ್ನು ಭೇಟಿ ಮಾಡಿದ್ದನ್ನು ಪ್ರಕಾಶ್ ರಾಜ್ ಸಮರ್ಥಿಸಿಕೊಂಡಿದ್ದಾರೆ. ವಿಜಯ್ ತಮ್ಮ ಸ್ನೇಹಿತ ಅಜಿತ್ ಅವರನ್ನು ಭೇಟಿಯಾಗಿದ್ದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯವಾಗಿ ಅವರು ಹೋದ ಕೆಲಸ ಯಶಸ್ವಿಯಾಗಿದೆಯೇ ಎಂದು ನೋಡಬೇಕು, ವಿದೇಶಿ ಪ್ರವಾಸದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ತಂದಿರುವುದಾಗಿ ಅವರು ಹೇಳಿದ್ದಾರೆ ಎಂದರು.

ಇದನ್ನೂ ಓದಿ:

ಮಾಜಿ ಸಿಎಂ ಸ್ಟಾಲಿನ್ ಸೋಲು ಆಘಾತ ತಂದಿದೆ

ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲಿ ಸೋತಿರುವುದು ತಮಗೆ ಭಾರಿ ಆಘಾತ ತಂದಿದೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಬೇಕಿದೆ ಎಂದು ತಿಳಿಸಿದರು. ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನೀರಿನ ವಿವಾದದ ಬಗ್ಗೆ ಮಾತನಾಡಿದ ಅವರು, “ಎರಡೂ ರಾಜ್ಯಗಳು ಒಟ್ಟಿಗೆ ಕುಳಿತು ಮಾತನಾಡಿ, ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು” ಎಂದಿದ್ದಾರೆ.

Must Read