ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್ ಪತ್ರಿಕೆ ಸೋರಿಕೆ ಹಗರಣವನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಅನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತೀವ್ರವಾಗಿ ಖಂಡಿಸಿದ್ದಾರೆ. ಈ ಭೀಕರ ಪೊಲೀಸ್ ದೌರ್ಜನ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆ ಹಾಗೂ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹುಚ್ಚು ನಾಯಿಗಳಿಗಿಂತಲೂ ಕಡೆಯಾಗಿ ದಾಳಿ
ದೆಹಲಿ ಪೊಲೀಸರ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆ.ಸಿ. ವೇಣುಗೋಪಾಲ್, “ತಮ್ಮ ಹಕ್ಕುಗಳಿಗಾಗಿ ಮತ್ತು ಭವಿಷ್ಯಕ್ಕಾಗಿ ಧ್ವನಿ ಎತ್ತಿದ ದೇಶದ ಯುವ ಸಮೂಹವನ್ನು ಪೊಲೀಸರು ಹುಚ್ಚು ನಾಯಿಗಳಿಗಿಂತಲೂ ಅತ್ಯಂತ ದಾರುಣವಾಗಿ ಮತ್ತು ಅಮಾನವೀಯವಾಗಿ ಹೊಡೆದಿದ್ದಾರೆ. ನ್ಯಾಯ ಕೇಳಲು ಬಂದ ವಿದ್ಯಾರ್ಥಿಗಳನ್ನು ಕ್ರಿಮಿನಲ್ಗಳಂತೆ ನಡೆಸಿರುವುದು ಖಂಡನೀಯ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:
ಸಂಸತ್ತಿನಲ್ಲಿ ಅಮಿತ್ ಶಾ ಉತ್ತರ ನೀಡಲಿ
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದೆಹಲಿ ಪೊಲೀಸರ ಈ ನಡೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿರುವ ಅವರು, ಈ ಘಟನೆಯ ಕುರಿತು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ದೇಶಕ್ಕೆ ಸ್ಪಷ್ಟನೆ ಮತ್ತು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ದೇಶದ ಯುವಕರ ಧ್ವನಿಯನ್ನು ಅಡಗಿಸಲು ಇಂತಹ ದೌರ್ಜನ್ಯದ ಮಾರ್ಗಗಳನ್ನು ಬಳಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.



