ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಮೈ ಭಾರತ್’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ 2026ರ ಯುವ ಪಡಾಪಡೆ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೇರ ಸಂವಾದ ನಡೆಸಿದರು. ಗಡಿ ಭಾಗದ ಹಳ್ಳಿಗಳಲ್ಲಿ ಸೇವೆ ಸಲ್ಲಿಸಿ ಮರಳಿದ 400ಕ್ಕೂ ಹೆಚ್ಚು ಉತ್ಸಾಹಿ ವಿದ್ಯಾರ್ಥಿಗಳು ಈ ವಿಶೇಷ ಸಭೆಯಲ್ಲಿ ತಮ್ಮ ಅಪೂರ್ವ ಅನುಭವಗಳನ್ನು ಪ್ರಧಾನಿಯವರೊಂದಿಗೆ ಹಂಚಿಕೊಂಡರು.
74 ಗಡಿ ಗ್ರಾಮಗಳಲ್ಲಿ ಯುವಜನರ ಸೇವೆ
ಜೂನ್ 4ರಿಂದ 30ರವರೆಗೆ ಎರಡು ಹಂತಗಳಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮವು ಲಡಾಖ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳ ಸುಮಾರು 74 ಗಡಿ ಗ್ರಾಮಗಳನ್ನು ತಲುಪಿತ್ತು. ಇಲ್ಲಿನ ಸ್ಥಳೀಯ ಸಮುದಾಯಗಳ ಜೊತೆ ವಾಸಿಸಿದ ಯುವಜನರು, ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರು. ಇದರೊಂದಿಗೆ ಸ್ವಚ್ಛತಾ ಅಭಿಯಾನ, ಗಿಡ ನೆಡುವುದು, ಯುವ ಸಮ್ಮೇಳನ ಹಾಗೂ ಸಾಂಸ್ಕೃತಿಕ ವಿನಿಮಯದಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
3 ಲಕ್ಷ ಅಭ್ಯರ್ಥಿಗಳಲ್ಲಿ 400 ಜನರಿಗೆ ಸಿಕ್ಕ ಅವಕಾಶ!
ಈ ವಿಕಸಿತ್ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ರಾಷ್ಟ್ರಮಟ್ಟದ ಆನ್ಲೈನ್ ಕ್ವಿಜ್ ಸ್ಪರ್ಧೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ದೇಶಾದ್ಯಂತ 3 ಲಕ್ಷಕ್ಕೂ ಅಧಿಕ ಯುವಕ-ಯುವತಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಅವರಲ್ಲಿ ಕೇವಲ 400 ಪ್ರತಿಭಾವಂತ ಯುವಜನರು ಈ ಪ್ರಕಲ್ಪಕ್ಕೆ ಆಯ್ಕೆಯಾಗಿದ್ದರು.
ಗ್ರಾಮೀಣ ಸಂಸ್ಕೃತಿ, ಸ್ಥಳೀಯ ಕಲೆ ಹಾಗೂ ಗ್ರಾಮೀಣ ಜೀವನಶೈಲಿಯನ್ನು ಹತ್ತಿರದಿಂದ ಕಂಡ ವಿದ್ಯಾರ್ಥಿಗಳು, ಗಡಿ ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ಸಲಹೆಗಳನ್ನು ನೀಡಿ ಪ್ರಧಾನಿಯವರ ಮೆಚ್ಚುಗೆಗೆ ಪಾತ್ರರಾದರು.



