ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಂದಿನಿ ಉತ್ಪನ್ನಗಳ ಗುಣಮಟ್ಟಕ್ಕೆ ಒಂದೊಳ್ಳೆ ಹೆಸರಿದೆ. ಎಷ್ಟೇ ಬ್ರ್ಯಾಂಡ್‌ಗಳು ಪೈಪೋಟಿಗೆ ಬಂದರೂ ನಂದಿನಿ ಎಲ್ಲವನ್ನೂ ದಾಟಿ ಮುನ್ನುಗ್ಗುತ್ತಿದೆ. ಇಂತಹ ಬ್ರ್ಯಾಂಡ್ ಹೆಸರನ್ನು ಹಾಳು ಮಾಡುವ ಕೆಲಸ ಮಾಡಿರುವ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ನಂದಿನಿ ಮೊಸರಿನ ಪ್ಯಾಕೇಟ್‌ನ ಒಳಗೆ ಸಿಮ್ ಕಾರ್ಡ್ ಇದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದರ ಸತ್ಯಾಸತ್ಯತೆ ಹೊರಗೆ ಬಿದ್ದಿದೆ.
ಮದ್ದೂರು ನಗರದ ವಿಶ್ವೇಶ್ವರಯ್ಯ ನಗರದ ನಿವಾಸಿ ಅರುಣ್ ಕುಮಾರ್ ಎನ್ನುವವರು ರಾತ್ರಿ ಕೆಲಸ ಮುಗಿಸಿ ಮನೆಗೆ ಬರುವಾಗ ನಂದಿನಿ ಮೊಸರಿನ ಪ್ಯಾಕೇಟ್ ಖರೀದಿ ಮಾಡಿದ್ದರು. ಮನೆಗೆ ಬಂದು ನೋಡಿದಾಗ ಅದರೊಳಗೆ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದರು. ಇದು ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ತದನಂತರ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕರು ಈ ಆರೋಪವನ್ನು ನಿರಾಕರಿಸಿದ್ದರು. ಡೈರಿಯಲ್ಲಿ ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು.ಜೊತೆಗೆ ಮದ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಅರುಣ್ ಬಳಿ ಇದ್ದ ಸಿಮ್ ಕಾರ್ಡ್ ತೆಗೆದುಕೊಂಡು ನಂಬರ್ ಹಾಗೂ ನೋಂದಣಿಯನ್ನು ಪರಿಶೀಲಿಸದರು. ಈ ವೇಳೆ ಸಿಮ್ ಅರುಣ್ ಕುಮಾರ್ ಬಾಮೈದನ ಹೆಸರಿನಲ್ಲಿರುವುದು ಗೊತ್ತಾಯಿತು.
ಈ ಸಿಮ್‌ನ್ನು ಅರುಣ್ ಪತ್ನಿ ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತದನಂತರ ಅರುಣ್ ಕುಮಾರ್‌ಗೆ ಪೊಲೀಸರು ತೀವ್ರ ವಿಚಾರಣೆ ಮಾಡಿದ್ದು, ತಾನೇ ಸಿಮ್ ಹಾಕಿ ಸುಳ್ಳು ವಿಡಿಯೋ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಪೊಲೀಸರು ಅವರನ್ನು ಬಂಧಿಸಿದ್ದಾರೆ.



