ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶದ ಅತಿದೊಡ್ಡ ರಹಸ್ಯಗಳಲ್ಲಿ ಒಂದಾದ ಶನಿ ಗ್ರಹದ ಉಂಗುರಗಳನ್ನು ಈಗ ನೇರವಾಗಿ ಸ್ಪರ್ಶಿಸಿ ಅಧ್ಯಯನ ಮಾಡುವ ಕನಸು ನನಸಾಗಿಸಲು ಸಿದ್ಧತೆ ನಡೆಯುತ್ತಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಸಾಹಸಕ್ಕೆ ಮುಂದಾಗಿದ್ದು, ಎರಡು ಮಹತ್ವಾಕಾಂಕ್ಷೆಯ ಯೋಜನೆಗಳ ಮೂಲಕ ಶನಿ ಗ್ರಹದ ಹಿಮಾವೃತ ಉಂಗುರಗಳ ಒಳಗಿರುವ ರಹಸ್ಯಗಳನ್ನು ಬಿಚ್ಚಿಡಲು ಸಜ್ಜಾಗುತ್ತಿದೆ.
ಶತಮಾನಗಳಿಂದಲೂ ಮನುಷ್ಯನ ಕಲ್ಪನೆಗೆ ಸವಾಲಾಗಿರುವ ಶನಿ ಗ್ರಹದ ಈ ಉಂಗುರಗಳು ಸೌರವ್ಯೂಹದ ಹುಟ್ಟು, ಗ್ರಹಗಳ ಬೆಳವಣಿಗೆ ಮತ್ತು ಬಾಹ್ಯಾಕಾಶದ ಬದಲಾವಣೆಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಅಡಗಿಸಿಕೊಂಡಿವೆ. ಈ ರಹಸ್ಯಗಳನ್ನು ತಿಳಿಯಲು ನಾಸಾದ ಇನ್ನೋವೇಟಿವ್ ಅಡ್ವಾನ್ಸ್ಡ್ ಕಾನ್ಸೆಪ್ಟ್ಸ್ (NIAC) ಕಾರ್ಯಕ್ರಮದ ಅಡಿಯಲ್ಲಿ ಎರಡು ಹೊಸ ಯೋಜನೆ ರೂಪಿಸಲಾಗುತ್ತಿದೆ.
ಉಂಗುರಗಳನ್ನು ಮುಟ್ಟುವ ಪ್ರಯತ್ನ
ಶನಿ ಗ್ರಹದ ಬಗ್ಗೆ ನಮ್ಮಹಳೆಯ ಲೆಕ್ಕಾಕಾರಗಳನ್ನು ಬುಡಮೇಲು ಮಾಡಿರುವುದು ಕ್ಯಾಸಿನಿ! 1997ರಲ್ಲಿ ಉಡಾವಣೆಯಾದ ಕ್ಯಾಸಿನಿ 2017ರವರೆಗೆ ಶನಿ ಗ್ರಹವನ್ನು ಸುತ್ತುತ್ತಾ ಅಲ್ಲಿನ ವಾತಾವರಣ, ಚಂದ್ರಗಳು ಮತ್ತು ಉಂಗುರಗಳ ಬಗ್ಗೆ ಹಲವು ಹೊಸ ಸಂಗತಿಗಳನ್ನು ತಿಳಿಸಿತು. ಆದರೆ ಶನಿ ಗ್ರಹದ ಉಂಗುರದ ಒಂದು ಕಣವನ್ನು ಕೂಡಾ ಪರೀಕ್ಷಿಸಲು ಅದಕ್ಕೆ ಸಾಧ್ಯವಾಗಿಲ್ಲ. ಅದಕ್ಕಾಗಿಯೇ ಈಗ ಹೊಸ ಎರಡು ಯೋಜನೆಗಳು ಸಿದ್ಧವಾಗುತ್ತಿವೆ.
ಯೋಜನೆ 1: PRAXIS ‘ಟಚ್ ಅಂಡ್ ಗೋ’ ಮಿಷನ್
ಮೊದಲ ಯೋಜನೆಯ ಹೆಸರು PRAXIS (Planetary Rings Autonomous Exploration with In-situ Sampling). ಇದು ಶನಿಯ ಉಂಗುರಗಳನ್ನು ನೇರವಾಗಿ ಸ್ಪರ್ಶಿಸಿ ಮಾದರಿ ಸಂಗ್ರಹಿಸುವ ಹೊಸ ರೀತಿಯ ರೋಬೋಟಿಕ್ ಮಿಷನ್ ಆಗಿದೆ. ಈ ಯೋಜನೆಯ ನೇತೃತ್ವವನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ವಿಜ್ಞಾನಿ ಡಾ. ಬಿ. ಮಾರ್ಕೊ ಕ್ವಾಡ್ರೆಲ್ಲಿ ವಹಿಸಲಿದ್ದಾರೆ. ಸಾಮಾನ್ಯವಾಗಿ ಶನಿ ಗ್ರಹದ ಉಂಗುರಗಳ ಒಳಗೆ ನೇರವಾಗಿ ಹಾರುವುದು ಅಪಾಯಕಾರಿ. ಏಕೆಂದರೆ ಅಲ್ಲಿ ಸಾವಿರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಂಜುಗಡ್ಡೆ ಮತ್ತು ಕಲ್ಲಿನ ಕಣಗಳು ಅತಿವೇಗದಲ್ಲಿ ಚಲಿಸುತ್ತಿರುತ್ತವೆ. ಹೀಗಾಗಿ PRAXIS ನೇರವಾಗಿ ಒಳಗೆ ಹೋಗುವುದಿಲ್ಲ. ಬದಲಿಗೆ ಬಾಹ್ಯಾಕಾಶ ನೌಕೆ ಉಂಗುರಗಳ ಮೇಲ್ಭಾಗದಲ್ಲಿ ಸುರಕ್ಷಿತವಾಗಿ ತೇಲುತ್ತದೆ.
ಇದನ್ನೂ ಓದಿ:
ಉದ್ದವಾದ ವಿಶೇಷ ರೋಬೋಟಿಕ್ ದಂಡವನ್ನು ಕೆಳಗೆ ಇಳಿಸುತ್ತದೆ. ಆ ದಂಡ ಕ್ಷಣಕಾಲ ಉಂಗುರದ ಮೇಲ್ಮೈಯನ್ನು ಸ್ಪರ್ಶಿಸಿ ಮಾದರಿಗಳನ್ನು ಸಂಗ್ರಹಿಸುತ್ತದೆ. ನಂತರ ತಕ್ಷಣವೇ ಮೇಲಕ್ಕೆ ಮರಳುತ್ತದೆ. ವಿಶೇಷ ಎಂದರೆ ಈ ಕಾರ್ಯದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ.
ಯೋಜನೆ 2: 10,000 ಮೈಕ್ರೋ ರೋಬೋಟ್‌ಗಳ ದಾಳಿ
ಎರಡನೇ ಯೋಜನೆ ಇನ್ನಷ್ಟು ವಿಭಿನ್ನವಾಗಿದೆ. ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಮೈಕೆಲ್ ರುಬೆನ್‌ಸ್ಟೈನ್ ನೇತೃತ್ವದ ಈ ಯೋಜನೆಯಲ್ಲಿ ಸುಮಾರು 10,000 ಸಣ್ಣ ಫೆಮ್ಟೋಸ್ಯಾಟಲೈಟ್‌ಗಳನ್ನು (Femtosatellites) ಬಳಸುವ ಉದ್ದೇಶವಿದೆ. ಇವು ಸಾಮಾನ್ಯ ಉಪಗ್ರಹಗಳಂತೆ ದೊಡ್ಡದಾಗಿರುವುದಿಲ್ಲ. ಕೆಲವೇ ಸೆಂಟಿಮೀಟರ್ ಗಾತ್ರದ ಈ ಪುಟ್ಟ ರೋಬೋಟ್‌ಗಳನ್ನು ಶನಿ ಗ್ರಹದ ಉಂಗುರಗಳು, ವಾತಾವರಣ, ಕಾಂತೀಯ ಕ್ಷೇತ್ರದೊಳಗೆ ಕಳುಹಿಸಲಾಗುತ್ತದೆ. ಕೆಲವು ಮೈಕ್ರೋ ರೋಬೋಟ್‌ಗಳು ನಾಶವಾದರೂ, ಉಳಿದವುಗಳು ಮಾಹಿತಿ ಸಂಗ್ರಹಿಸುತ್ತಲೇ ಇರುತ್ತವೆ. ಇವು ಒಟ್ಟಾಗಿ ಶನಿಯ ಉಂಗುರಗಳ 3D ನಕ್ಷೆ, ವಾತಾವರಣದ ಮಾಹಿತಿ, ಕಾಂತೀಯ ಕ್ಷೇತ್ರದ ವಿವರಗಳನ್ನು ಸಂಗ್ರಹಿಸುವ ಗುರಿ ಹೊಂದಿವೆ.
ಈ ಎರಡೂ ಯೋಜನೆಗಳು ಇನ್ನೂ ಆರಂಭಿಕ ಪರಿಕಲ್ಪನೆಯ ಹಂತದಲ್ಲಿವೆ. ಆದರೆ ನಾಸಾ ನೀಡುತ್ತಿರುವ ಬೆಂಬಲವು ಭವಿಷ್ಯದ ಬಾಹ್ಯಾಕಾಶ ಸಂಶೋಧನೆಗೆ ಹೊಸ ದಿಕ್ಕನ್ನು ತೋರಿಸುತ್ತಿದೆ. ಇವು ಯಶಸ್ವಿಯಾದರೆ, ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಶನಿ ಗ್ರಹದ ಉಂಗುರಗಳ ವಸ್ತುಗಳನ್ನು ನೇರವಾಗಿ ಅಧ್ಯಯನ ಮಾಡುವ ಅವಕಾಶ ಸಿಗಲಿದೆ.



