July 28, 2026
Tuesday, July 28, 2026
spot_img

ಮೈಸೂರಿನಲ್ಲಿ ತಲೆಎತ್ತಿದ ವಿವೇಕ ಸ್ಮಾರಕ: ಆಗಸ್ಟ್ 1ರಂದು  ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 1ರಂದು ಮೈಸೂರಿಗೆ ಭೇಟಿ ನೀಡಲಿದ್ದು, ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ‘ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರ’ವನ್ನು ದೇಶಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 35 ರಿಂದ 45 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಈ ಐತಿಹಾಸಿಕ ಸ್ಮಾರಕ ತಲೆಎತ್ತಿದೆ.

ಐತಿಹಾಸಿಕ ಸ್ಥಳದಲ್ಲಿ ಸ್ಮಾರಕ ನಿರ್ಮಾಣ:

1892ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ತಂಗಿದ್ದ ಅದೇ ಪವಿತ್ರ ಸ್ಥಳದಲ್ಲೇ ಈ ಭವ್ಯ ಸ್ಮಾರಕವನ್ನು ಮರುನಿರ್ಮಾಣ ಮಾಡಲಾಗಿದೆ. ಯುವಜನತೆಯಲ್ಲಿ ನೈತಿಕ ಮೌಲ್ಯಗಳು ಹಾಗೂ ಜೀವನ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಸಾಂಸ್ಕೃತಿಕ ಯುವ ಕೇಂದ್ರವು ಕಾರ್ಯನಿರ್ವಹಿಸಲಿದೆ.

ವಿಶೇಷ ಪ್ರತಿಮೆ ಅನಾವರಣ:

ಪ್ರಧಾನಿಯವರು ಆಂಧ್ರಪ್ರದೇಶದಿಂದ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ವಾಯುಸೇನೆಯ ಎಂಐ-17 ಹೆಲಿಕಾಪ್ಟರ್ ಮೂಲಕ ಮೈಸೂರು ವಿಶ್ವವಿದ್ಯಾಲಯದ ಓವಲ್ ಮೈದಾನಕ್ಕೆ ತಲುಪಲಿದ್ದಾರೆ. ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ನಾರಾಯಣ ಶಾಸ್ತ್ರಿ ರಸ್ತೆಯ ವಿವೇಕ ಸ್ಮಾರಕಕ್ಕೆ ತೆರಳಿ, ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.  ನಂತರ ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಆವರಣಕ್ಕೆ ಭೇಟಿ ನೀಡಿ, ಅಲ್ಲಿ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದರ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಹಾಗೂ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ;

ಮೈಸೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ:

ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಹಿರಿಯ ಅಧಿಕಾರಿಗಳು ಈಗಾಗಲೇ ಕಾರ್ಯಕ್ರಮದ ವೇದಿಕೆ ಹಾಗೂ ರಸ್ತೆಗಳ ಭದ್ರತೆಯನ್ನು ಪರಿಶೀಲಿಸಿದ್ದಾರೆ. ಪ್ರಧಾನಿ ಸಂಚರಿಸುವ ಜಿಎಲ್‌ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದ್ದು, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಸೌಂದರ್ಯೀಕರಣ ಕಾರ್ಯಗಳು ಭರದಿಂದ ಸಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !