ಹೊಸದಿಗಂತ ವರದಿ ಬೆಳಗಾವಿ:
ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಮಾಜಿ ಸಚಿವೆ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯ ಕುವೆಂಪುನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ 36 ದೇವಸ್ಥಾನಗಳಿಗೆ ಮೂರನೇ ಹಾಗೂ ಅಂತಿಮ ಕಂತಿನ ಅನುದಾನ ಬಿಡುಗಡೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಗಳ ಪ್ರತಿನಿಧಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.
ಕಳೆದ ಏಳು ವರ್ಷಗಳಲ್ಲಿ ಕ್ಷೇತ್ರದ 156ಕ್ಕೂ ಹೆಚ್ಚು ದೇವಸ್ಥಾನಗಳ ಅಭಿವೃದ್ಧಿಗೆ 150 ಕೋಟಿಗೂ ಅಧಿಕ ಅನುದಾನ ದೊರಕಿಸಲಾಗಿದೆ. ವಿವಿಧ ದೇವಸ್ಥಾನಗಳಿಗೆ 10 ಲಕ್ಷದಿಂದ 5 ಕೋಟಿವರೆಗೆ ಅನುದಾನ ಒದಗಿಸಲಾಗಿದ್ದು, ಧಾರ್ಮಿಕ ಕೇಂದ್ರಗಳು ಕೇವಲ ಕಟ್ಟಡಗಳಲ್ಲ; ಅವು ಜನರ ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದು ಹೆಬ್ಬಾಳ್ಕರ್ ಹೇಳಿದರು. ಎಲ್ಲ ಸಮುದಾಯಗಳ ಆರಾಧನಾ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲೂ ಹಲವು ಮಹತ್ವದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದುವರೆಗೆ 253 ಸರ್ಕಾರಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಐದು ಕಡೆ ಹೊಸ ಶಾಲಾ ಕಟ್ಟಡಗಳು ಹಾಗೂ ನಾಲ್ಕು ಕೆಪಿಎಸ್ ಶಾಲೆಗಳಿಗೆ ಮಂಜೂರಾತಿ ದೊರೆತಿದೆ. ತುಮ್ಮರಗುದ್ದಿ ಮತ್ತು ಹಿರೇಬಾಗೇವಾಡಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತರಲಾಗಿದೆ. ಮಣ್ಣೂರಿನಲ್ಲಿ ಬಿ.ಎಸ್ಸಿ. ನರ್ಸಿಂಗ್ ಕಾಲೇಜು ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕ್ಷೇತ್ರದ 100ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ವಿವಿಧ ಮೂಲಗಳಿಂದ ಸುಮಾರು 1,000 ಕೋಟಿ ಅನುದಾನ ಒದಗಿಸಲಾಗಿದೆ. ರಾಜಹಂಸಗಡ ಕೋಟೆ ಅಭಿವೃದ್ಧಿ, ಬ್ರಿಡ್ಜ್ ಕಂ ಬ್ಯಾರೇಜ್ ಸೇರಿದಂತೆ ನೀರಾವರಿ ಮತ್ತು ಮೂಲಸೌಕರ್ಯ ಕಾಮಗಾರಿಗಳಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:
ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ ಹೆಬ್ಬಾಳ್ಕರ್, ಧಾರ್ಮಿಕ ನಂಬಿಕೆಗಳ ಜೊತೆಗೆ ಇತರ ಧರ್ಮಗಳ ಬಗ್ಗೆಯೂ ಗೌರವ ಇರಬೇಕು. “ದೇವರು ಮತ್ತು ಆರಾಧನಾ ಪದ್ಧತಿಗಳು ಬೇರೆ ಇರಬಹುದು; ಆದರೆ ಊರು, ಮಣ್ಣು ಮತ್ತು ಅಭಿವೃದ್ಧಿಯ ಕನಸು ಒಂದೇ” ಎಂದು ಹೇಳಿದರು.
ಅತಿವಾಡದಲ್ಲಿ ರೈತರಿಂದ 72 ಎಕರೆ ಭೂಮಿ ಪಡೆದು ವರ್ಷಗಳು ಕಳೆದರೂ ಪರಿಹಾರ ನೀಡದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ರೈತರಿಗೆ ತೊಂದರೆಯಾಗುವ ಯಾವುದೇ ಯೋಜನೆಯನ್ನು ಮರುಪರಿಶೀಲಿಸುವುದಾಗಿ ಭರವಸೆ ನೀಡಿದರು. ಹೆಸ್ಕಾಂ ಸಿಬ್ಬಂದಿ ಹಾಗೂ ಲೈನ್‌ಮನ್‌ಗಳ ಸೇವೆಯನ್ನು ಶ್ಲಾಘಿಸಿದ ಅವರು, ಅವರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ವೇಳೆ ರಾಜ್ಯ ಸಚಿವ ಸಂಪುಟಕ್ಕೆ ಮಹಿಳಾ ಸಚಿವರ ಸೇರ್ಪಡೆ ಕುರಿತು ಕೇಳಿದ ಪ್ರಶ್ನೆಗೆ, ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಸಚಿವರನ್ನು ಕಾಣಬಹುದು ಎಂದು ಹೆಬ್ಬಾಳ್ಕರ್ ಹೇಳಿದರು. ಅಧಿಕಾರ ಶಾಶ್ವತವಲ್ಲ, ಆದರೆ ಅಧಿಕಾರದಲ್ಲಿದ್ದಾಗ ಜನರು ನೆನಪಿಸಿಕೊಳ್ಳುವಂತಹ ಕೆಲಸ ಮಾಡುವುದು ಮುಖ್ಯ ಎಂದರು.



