ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೂರನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಿಗೆ ಶಾಕ್ ಆಗಿದೆ. ಈ ಬ್ಯಾಂಕ್‌ನ 1 TB (ಟೆರಾಬೈಟ್) (1,000 GB) ಮಾಹಿತಿಗಳು ಡೇಟಾ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಸಿಸ್ಟಮ್ ಹ್ಯಾಕ್ ಆಗಿದ್ದು, ಲಕ್ಷಾಂತರ ಜನರ ಸೂಕ್ಷ್ಮ ದಾಖಲೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ ಎನ್ನಲಾಗಿದೆ. ಜು.25 ರಂದು ಡಾರ್ಕ್ ವೆಬ್ ಅನ್ನು ಟ್ರ್ಯಾಕ್ ಮಾಡುವ Ransomware.live ಎಂಬ ಜಾಲತಾಣದಲ್ಲಿ ಈ ಮಾಹಿತಿ ಮೊದಲು ಪತ್ತೆಯಾಗಿತ್ತು.
ಟ್ರಿಪಲ್ ಎಕ್ಸ್ ಎಂಬ ಹ್ಯಾಕರ್ಸ್ ಗುಂಪು ಈ ಸೈಬರ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಗುಂಪು ಇತ್ತೀಚೆಗಷ್ಟೇ ಇಂಡೋನೇಷ್ಯಾದ ಸರ್ಕಾರಿ ಬ್ಯಾಂಕ್ ಒಂದರ ಡೇಟಾವನ್ನು ಕೂಡ ಇದೇ ರೀತಿ ಕದ್ದಿತ್ತು. ಆರಂಭಿಕ ವರದಿಗಳ ಪ್ರಕಾರ, ಬ್ಯಾಂಕಿನ ಇಮೇಲ್ ವ್ಯವಸ್ಥೆಯಲ್ಲಾದ ಲೋಪದಿಂದಾಗಿಯೇ ಹ್ಯಾಕರ್‌ಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ಯಾಂಕ್ ಫೋರೆನ್ಸಿಕ್ ಆಡಿಟ್ ಮೂಲಕ ತನಿಖೆ ನಡೆಸುತ್ತಿದೆ.
ಹ್ಯಾಕರ್‌ಗಳು ಸುಮಾರು 1,000 GB ಡೇಟಾವನ್ನು ಇಂಟರ್ನೆಟ್‌ನಲ್ಲಿ ಉಚಿತವಾಗಿ ಹಾಗೂ ಹರಾಜಿನ ಮೂಲಕ ಲೀಕ್ ಮಾಡಿದ್ದಾರೆ. ಇದರಲ್ಲಿ ಬ್ಯಾಂಕ್ ಖಾತೆ ತೆರೆಯುವಾಗ ಗ್ರಾಹಕರು ಸಲ್ಲಿಸಿದ 1 ಲಕ್ಷದಿಂದ 3 ಲಕ್ಷದಷ್ಟು ಕಸ್ಟಮರ್ ಅಪ್ಲಿಕೇಶನ್ ಫಾರ್ಮ್‌ಗಳು, ಅವರ ಫೋಟೋಗಳು ಮತ್ತು ಗುರುತಿನ ಚೀಟಿಗಳಿವೆ ಎನ್ನಲಾಗಿದೆ.
ಜನರ ಹೆಸರು,ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಸೇವಿಂಗ್ಸ್, ಬ್ಯಾಲೆನ್ಸ್ ವಿವರ ಹಾಗೂ ನೆಟ್ ಬ್ಯಾಂಕಿಂಗ್ ಬಳಕೆದಾರರ ಐಡಿಗಳು ಸೋರಿಕೆಯಾಗಿದೆ.



