July 29, 2026
Wednesday, July 29, 2026
spot_img

ವಿಬಿ-ಜಿ-ರಾಮ್ ಜಿ ಯೋಜನೆಗೆ ಹಣದ ಕೊರತೆ ಇಲ್ಲ: 2,900 ಕೋಟಿ ಅನುದಾನ ಬಿಡುಗಡೆ;  ಸಚಿವ ಈಶ್ವರ ಖಂಡ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಒದಗಿಸುವ ‘ವಿಬಿ-ಜಿ-ರಾಮ್ ಜಿ’ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ರಾಜ್ಯದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆಯಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 1ರಿಂದ ಜಾರಿಗೆ ಬಂದಿರುವ ಈ ಯೋಜನೆಗಾಗಿ ಮೊದಲ ತ್ರೈಮಾಸಿಕ ಅವಧಿಗೆ ಒಟ್ಟು 2,900 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಅನುದಾನ:

60:40ರ ಧನಸಹಾಯ ಅನುಪಾತದ ನಿಯಮದ ಅನ್ವಯ ಈ ಬೃಹತ್ ನಿಧಿಯನ್ನು ಕ್ರೋಢೀಕರಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಪ್ರಥಮ ತ್ರೈಮಾಸಿಕಕ್ಕೆ 1,700 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ1,200 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ತಿಂಗಳು ಗ್ರಾಮೀಣ ಭಾಗದ 5 ಲಕ್ಷ ಜನರಿಗೆ ಕೆಲಸ ನೀಡಿ, ಮಾಸಿಕ ಒಟ್ಟು 1.5 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವಷ್ಟು ಭರಪೂರ ನಿಧಿ ಲಭ್ಯವಿದೆ.

ಯಾವೆಲ್ಲಾ ಕೆಲಸಗಳಿಗೆ ಅವಕಾಶ? 

ಈ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಹಾಗೂ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕೃಷಿ ಹೊಂಡ, ಬಾವಿಗಳ ನಿರ್ಮಾಣ, ಹನಿ ನೀರಾವರಿ ಸೌಲಭ್ಯ, ಕೆರೆ ಮತ್ತು ಕಾಲುವೆಗಳ ಹೂಳು ಎತ್ತುವುದು ಹಾಗೂ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಕೆಲಸ ಕೇಳಿ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಉದ್ಯೋಗ ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಒ (CEO) ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಕುಡಿಯುವ ನೀರಿಗಾಗಿ 341 ಕೋಟಿ ರೂ. ಲಭ್ಯ:

ರಾಜ್ಯದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಒಟ್ಟು 341 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಗ್ರಾಮೀಣ ಕುಡಿಯುವ ನೀರು ಸರಬರಾಜಿಗಾಗಿ ಈಗಾಗಲೇ 117 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ.ಗಳನ್ನು ಘೋಷಿಸಿದ್ದು, ನೀರಿನ ಪೂರೈಕೆಗೆ ಯಾವುದೇ ಹಣದ ಆಡಚಣೆ ಎದುರಾಗುವುದಿಲ್ಲ.

ಇದನ್ನೂ ಓದಿ:

ಟ್ಯಾಂಕರ್ ನೀರು ಪೂರೈಕೆಗೆ ಮುನ್ನ ಗುಣಮಟ್ಟ ಪರೀಕ್ಷೆ ಕಡ್ಡಾಯ:

ಸಾಂಪ್ರದಾಯಿಕ ಜಲಮೂಲಗಳು ಒಣಗಿರುವ ಗ್ರಾಮ ಪಂಚಾಯತಿಗಳಲ್ಲಿ ಪರ್ಯಾಯ ಜಲಮೂಲಗಳನ್ನು ಗುರುತಿಸಬೇಕು. ಖಾಸಗಿ ಕೊಳವೆಬಾವಿ ಅಥವಾ ತೆರೆದ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಒದಗಿಸಬೇಕು. ಆದರೆ ಟ್ಯಾಂಕರ್‌ಗಳ ಮೂಲಕ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುನ್ನ ಕಡ್ಡಾಯವಾಗಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಸಾರ್ವಜನಿಕರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು. ಅತ್ಯಂತ ಅಗತ್ಯವಿದ್ದರಷ್ಟೇ ಹೊಸ ಕೊಳವೆಬಾವಿಗಳನ್ನು ಕೊರೆಯಿಸಬೇಕು ಎಂದು ಸಚಿವರು ಇದೇ ವೇಳೆ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !