ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ರಸ್ತೆ ಹಾಗೂ ಕಾಲುದಾರಿಗಳಲ್ಲಿ ಹಲವು ದಿನಗಳಿಂದ ಬಿಟ್ಟುಹೋಗಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಇಂತಹ ವಾಹನಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗಿದೆ.
ಸಾವಿರಕ್ಕೂ ಹೆಚ್ಚು ವಾಹನಗಳಿಗೆ ನೋಟಿಸ್
ಇದುವರೆಗೆ 1,286 ಅನಾಥ ವಾಹನಗಳಿಗೆ ನೋಟಿಸ್ ಅಂಟಿಸಲಾಗಿದ್ದು, 172 ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗಿದೆ. ಸೆಂಟ್ರಲ್, ವೆಸ್ಟ್, ಸೌತ್, ನಾರ್ತ್ ಹಾಗೂ ಈಸ್ಟ್ ವಲಯಗಳಲ್ಲಿ ಈ ಕಾರ್ಯಾಚರಣೆ ಮುಂದುವರಿದಿದೆ. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ (ನಗರಾಭಿವೃದ್ಧಿ) ಸಚಿವರು ಕೃಷ್ಣ ಬೈರೇಗೌಡ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮ ಅಭಿಯಾನದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ:
ಸಾರ್ವಜನಿಕರಿಗೂ ಜವಾಬ್ದಾರಿ
ನಿಮ್ಮ ಪ್ರದೇಶದಲ್ಲಿ ಬಳಕೆಯಾಗದೆ ಬಿದ್ದಿರುವ ವಾಹನಗಳು ಕಂಡುಬಂದರೆ, BTP ASTraM ಮೊಬೈಲ್ ಆ್ಯಪ್ ಮೂಲಕ ಫೋಟೋ ಹಾಗೂ ಸ್ಥಳದ ಮಾಹಿತಿಯನ್ನು ಅಪ್‌ಲೋಡ್ ಮಾಡಿ ದೂರು ಸಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ನಾಗರಿಕರ ಸಹಕಾರ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



