September 14, 2026
Monday, September 14, 2026
spot_img

ಎಲ್ಲಿದ್ದಾನೆ ಮಸೂದ್ ಅಜರ್? ಸುಳಿವು ನೀಡಿದವರಿಗೆ 24 ಲಕ್ಷ ರೂ. ಬಹುಮಾನ ಘೋಷಿಸಿದ ಪಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಪಾಕಿಸ್ತಾನ ಸರ್ಕಾರ 7 ಮಿಲಿಯನ್ (ಸುಮಾರು 24.09 ಲಕ್ಷ ರೂ) ಬಹುಮಾನ ಘೋಷಿಸಿದೆ.

ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) ತನ್ನ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕರ ಪಟ್ಟಿಯಲ್ಲಿ ಅಜರ್‌ನ ಹೆಸರನ್ನು ಮುಂದುವರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

FATFನ ಸಭೆಗೂ ಮುನ್ನ ಈ ಹೊಸ ಕ್ರಮ

ಅಕ್ಟೋಬರ್ 26ರಿಂದ 30ರವರೆಗೆ ಪ್ಯಾರಿಸ್‌ನಲ್ಲಿ ಹಣಕಾಸು ಕಾರ್ಯಪಡೆ FATFನ ಪೂರ್ಣ ಸಭೆ ನಡೆಯಲಿದ್ದು, ಅದಕ್ಕೂ ಕೆಲವೇ ವಾರಗಳ ಮೊದಲು ಪಾಕಿಸ್ತಾನದ ಈ ಕ್ರಮ ಗಮನ ಸೆಳೆದಿದೆ. ಭಯೋತ್ಪಾದನೆಗೆ ಹಣಕಾಸು ನೆರವು, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ದೇಶಗಳ ಕ್ರಮವನ್ನು FATF ಪರಿಶೀಲಿಸುವ ಹಿನ್ನೆಲೆಯಲ್ಲಿ ಅಜರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

58 ವರ್ಷದ ಮಸೂದ್ ಅಜರ್ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಸ್ಥಾಪಕ ಮತ್ತು ಮುಖ್ಯಸ್ಥ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ.

ಇನ್ನೊಂದೆಡೆ, ಅಜರ್ ಪಾಕಿಸ್ತಾನದಲ್ಲಿಲ್ಲ ಎಂದು ಇಸ್ಲಾಮಾಬಾದ್ ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದು, ಆತ ಅಫ್ಘಾನಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ವಾದಿಸಿದೆ. ಆದರೆ FIAಯ 2026ರ ‘ರೆಡ್ ಬುಕ್ ಆಫ್ ಮೋಸ್ಟ್ ವಾಂಟೆಡ್ ಹೈ-ಪ್ರೊಫೈಲ್ ಟೆರರಿಸ್ಟ್ಸ್’ನಲ್ಲೂ ಆತನ ಹೆಸರು ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !