July 29, 2026
Wednesday, July 29, 2026
spot_img

50 ಎಸೆತಗಳಲ್ಲಿ 88 ರನ್! ದಿ ಹಂಡ್ರೆಡ್ ಲೀಗ್‌ನಲ್ಲಿ ಅಬ್ಬರಿಸಿದ ಭಾರತೀಯ ತಾರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ನ ಪ್ರತಿಷ್ಠಿತ ‘ದಿ ಹಂಡ್ರೆಡ್’ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಹೆಡಿಂಗ್ಲೆ ಮೈದಾನದಲ್ಲಿ ಸನ್‌ರೈಸರ್ಸ್ ಲೀಡ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ಸ್ಮೃತಿ ಅವರ ಏಕಾಂಗಿ ಹೋರಾಟದ ಬಲದಿಂದ ಅದ್ಭುತ ಜಯ ಸಾಧಿಸಿದೆ.

ಲೀಡ್ಸ್ ತಂಡಕ್ಕೆ ಸಾಧಾರಣ ಮೊತ್ತ

ಟಾಸ್ ಗೆದ್ದ ಮ್ಯಾಂಚೆಸ್ಟರ್ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರಂಭಿಕ ಆಘಾತ ಅನುಭವಿಸಿದರೂ, ಮಧ್ಯಮ ಕ್ರಮಾಂಕದಲ್ಲಿ ಫೀಬಿ ಲಿಚ್‌ಫೀಲ್ಡ್ (31) ಹಾಗೂ ಅನ್ನಾಬೆಲ್ ಸದರ್‌ಲ್ಯಾಂಡ್ (35) ಚೇತರಿಕೆ ನೀಡಿದರು. ಪರಿಣಾಮ ಸನ್‌ರೈಸರ್ಸ್ ಲೀಡ್ಸ್ ತಂಡವು ನಿಗದಿತ 100 ಎಸೆತಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 142 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

ಮ್ಯಾಂಚೆಸ್ಟರ್ ದಿಢೀರ್ ವಿಕೆಟ್ ಪತನ

143 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮ್ಯಾಂಚೆಸ್ಟರ್ ಪಡೆಗೆ ಮಂಧಾನ ಮತ್ತು ಲ್ಯಾನಿಂಗ್ (24) ಮೊದಲ ವಿಕೆಟ್‌ಗೆ 41 ರನ್‌ಗಳ ಉತ್ತಮ ಆರಂಭ ನೀಡಿದರು. ಆದರೆ, ಲ್ಯಾನಿಂಗ್ ನಿರ್ಗಮನದ ನಂತರ ಪೈಜ್ (5), ರಿಚಾ ಘೋಷ್ (4) ಸೇರಿದಂತೆ ಸಾಲು ಸಾಲು ವಿಕೆಟ್‌ಗಳು ಪತನಗೊಂಡು ತಂಡವು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಸ್ಮೃತಿ ಮಂಧಾನ ಅಜೇಯ ಹೋರಾಟ!

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಎದೆಗುಂದದ ಸ್ಮೃತಿ ಮಂಧಾನ, ಎದುರಾಳಿ ಬೌಲರ್‌ಗಳ ವಿರುದ್ಧ ಸವಾರಿನಡೆಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್-ಬೌಂಡರಿಗಳ ಸುರಿಮಳೆ ಗೈದ ಅವರು, ಕೇವಲ 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಿಡಿಸಿ ಅಜೇಯ 88 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಂಡೆಗೆ ತಲುಪಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !