ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಮ್ವರ್ಕ್ ಮಾಡದೇ ಶಾಲೆಗೆ ಬಂದಿದ್ದ ಎರಡನೇ ಕ್ಲಾಸಿನ ಬಾಲಕನಿಗೆ ಶಿಕ್ಷಕಿ ಲಾಠಿಯಿಂದ ಥಳಿಸಿರುವ ಘಟನೆ ಬಾಗಲಕೋಟೆಯ ರಬಕವಿಬನಹಟ್ಟಿಯ ನಾವಲಗಿ ಗ್ರಾಮದ ಶಾಲೆಯೊಂದರಲ್ಲಿ ನಡೆದಿದೆ.
ಅನಾರೋಗ್ಯ ಎಂದು ಬಾಲಕ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಇಂದು ಶಾಲೆಗೆ ಹಾಜರಾದಾಗ ಯಾಕೆ ಹೋಮ್ವರ್ಕ್ ಮಾಡಿಲ್ಲ ಎಂದು ಶಿಕ್ಷಕಿ ಕೇಳಿದ್ದಾರೆ. ಹುಷಾರಿರಲಿಲ್ಲ ಹೋಮ್ ವರ್ಕ್ ಮಾಡಲು ಆಗಿಲ್ಲ ಎಂದು ಬಾಲಕ ಹೇಳಿದ್ದಾನೆ. ಆಗ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಕೊಟ್ಟ ಕೆಲಸ ಮಾಡಿಕೊಂಡು ಬರಲು ಆಗುವುದಿಲ್ಲ ಎಂದು ಗರಂ ಆಗಿದ್ದಾರೆ. ನಂತರ ಲಾಠಿಯಿಂದ ಮಗುವಿನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ.
ಮಗುವಿನ ಬೆನ್ನು, ಕಾಲು, ಹೊಟ್ಟೆಯ ಮೇಲೆ ಹಲ್ಲೆ ಮಾಡಿದ್ದು, ಇಡೀ ದೇಹದಲ್ಲಿ ಗಾಯ, ಬಾಸುಂಡೆ ಕಾಣಿಸಿದೆ. ಮನೆಗೆ ಬಂದ ನಂತರ ಮಗು ಎಲ್ಲವನ್ನೂ ವಿವರಿಸಿದ್ದು, ತಕ್ಷಣ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತದನಂತರ ರಬಕವಿಬನಹಟ್ಟಿ ಠಾಣೆಯಲ್ಲಿ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ.



