ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಗೆ ಅತ್ಯಂತ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಈ ದಿನದಂದು ನಮ್ಮ ಜೀವನದಲ್ಲಿ ಅಂಧಕಾರವನ್ನು ಹೋಗಲಾಡಿಸಿ, ಜ್ಞಾನದ ಬೆಳಕನ್ನು ನೀಡಿದ ಗುರುಗಳಿಗೆ ಭಕ್ತಿ, ಗೌರವ ಮತ್ತು ಕೃತಜ್ಞತೆಯನ್ನು ಸಮರ್ಪಿಸಬೇಕಿದೆ. ಗುರುಗಳ ಮಾರ್ಗದರ್ಶನವಿಲ್ಲದೇ ಜೀವನದಲ್ಲಿ ಬೆಳಕೇ ಇಲ್ಲದಂತಾಗುತ್ತದೆ. ಗುರುಗಳನ್ನು ನೆನೆಯುವ ಈ ದಿನದಂದು ಏನೆಲ್ಲಾ ಮಾಡಬೇಕು?
ನಿಮ್ಮ ಗುರುಗಳು, ಶಿಕ್ಷಕರು, ತಂದೆ-ತಾಯಿ ಅಥವಾ ನಿಮಗೆ ಸರಿಯಾದ ಹಾದಿ ತೋರಿಸಿದ ಯಾವುದೇ ಮಾರ್ಗದರ್ಶಕರನ್ನು ಈ ದಿನ ಪೂಜಿಸಿ, ಅವರ ಆಶೀರ್ವಾದ ಪಡೆಯಿರಿ.
ಈ ದಿನವನ್ನು ಮಹರ್ಷಿ ವೇದವ್ಯಾಸರ ಜನ್ಮದಿನವಾಗಿಯೂ ಆಚರಿಸಲಾಗುತ್ತದೆ. ಹೀಗಾಗಿ ವಿಷ್ಣು ಮತ್ತು ವೇದವ್ಯಾಸರನ್ನು ಪೂಜಿಸುವುದು ವಿಶೇಷ. ಪೂಜೆಯಲ್ಲಿ ಅರಿಶಿನ ಬಣ್ಣದ ಹೂವುಗಳು, ಶ್ರೀಗಂಧ ಮತ್ತು ತುಳಸಿ ಎಲೆಗಳನ್ನು ಅರ್ಪಿಸಿ.
ಗುರು ಪೂರ್ಣಿಮೆಯಂದು ದಾನ ಮಾಡುವುದು ಅತ್ಯಂತ ಶ್ರೇಷ್ಠ. ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಬಡವರಿಗೆ, ಅಗತ್ಯವಿರುವವರಿಗೆ ಬಟ್ಟೆ, ಹಣ್ಣು, ಧಾನ್ಯ, ಅರಿಶಿಣ, ಪುಸ್ತಕಗಳನ್ನು ದಾನ ಮಾಡಬಹುದಾಗಿದೆ.
ಮನಸ್ಸಿನ ಶಾಂತಿ ಮತ್ತು ಜ್ಞಾನದ ವೃದ್ಧಿಗಾಗಿ ಈ ದಿನ ಪವಿತ್ರ ಗ್ರಂಥಗಳನ್ನು ಓದಿ. ಭಗವದ್ಗೀತೆ, ಶ್ರೀಮದ್ ಭಾಗವತ, ರಾಮಚರಿತಮಾನಸ ಅಥವಾ ಇತರ ನೀತಿ ಬೋಧಕ ಗ್ರಂಥಗಳ ಅಧ್ಯಯನವು ಮನಸ್ಸನ್ನು ಸನ್ಮಾರ್ಗದಲ್ಲಿ ನಡೆಸಲು ಸಹಾಯ ಮಾಡುತ್ತದೆ.
ಗುರು ಪೂರ್ಣಿಮೆಯಂದು ಸಂಪೂರ್ಣ ಸಾತ್ವಿಕ ಆಹಾರವನ್ನು ಸ್ವೀಕರಿಸಿ. ಕೋಪ, ಅಹಂಕಾರ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಎಲ್ಲರೊಂದಿಗೆ ಸಿಹಿ ಮಾತು, ನಮ್ರತೆಯ ನಡವಳಿಕೆಯನ್ನು ಬೆಳೆಸಿಕೊಳ್ಳುವುದು ಗುರುವಿನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.



